ಮಾಂತ್ರಿಕ ವಿನ್ಯಾಸ


ಸಂಚಲನದ ಸುತ್ತೆಲ್ಲಾ 

ಸುತ್ತಿ ಸುತ್ತಿ 

ಸೋತ ಸೋಗಲಾಡಿಯ ಮುಂದೆ

ಮಾರಣ ಹೋಮಕ್ಕೂ ಮಧುಮಾಸಕ್ಕೂ 

ಮದ್ಯದಲ್ಲಿ ಮಾಲಿನಿಯೂ ಮಧ್ಯವೂ ಮನನವೇ ಆಗಿ

ಮಾರನ ಮರೆವು ಮರೆತು 

ಮತ್ತೇ ಮರೆಯಾದಾಗ 

ಮಿರಿಮಿರಿ ಮಿಂಚುವ ಅಂಚುಂಟಲ್ಲಾ 

ಅಲ್ಲಿ ತೆರೆದಿತ್ತು ಮಾಂತ್ರಿಕ  ವಿನ್ಯಾಸ ವಿನ್ಯಾಸದ ಹದ್ದುಗಳಿಗೆ 

ಬಣ್ಣ ತುಂಬುತ್ತಾ ಆಡಿದ ಆಟಕ್ಕೆ 

ಅನಿಮಿತ ಏಕತಾನತೆಯ 

ಅನಿಯಂತ್ರಿತ ಚಲನೆಗೆ 

ಪೆಟ್ಟಾಕಿ ಪಟ್ಟಕ್ಕಿಟ್ಟದ್ದು ಸೃಷ್ಟಿಶೀಲತೆ 

ವ್ಯಾಖ್ಯಾನದ ಪರಿಹದ್ದಿಗೆ 

ಆ ವಿನ್ಯಾಸಗಳಿಗೇ ಭಯ ಎನ್ನುವಾಗ ಹಾಸು ಹೊಕ್ಕಿನ ಪ್ರತೀ ನೇಯ್ಗೆಯ 

ಅಂಚು ಅಂಚಿಗೂ ಕೂಡಬೇಕು 

ಸಾದ್ಯವಾದರೆ ಕಳೆಯಬೇಕು 

ಎಲ್ಲದರ ಸಾಮ್ಯವನ್ನೊಪ್ಪುವಂತಾಗುವ 

ಸಮರೂಪಕ್ಕೆ ಸರಿಸಮವಾಗಿ 

ರೂಪವುಕ್ಕಬೇಕು ಮತ್ತೆಂದು ಮತ್ತೆ ಮತ್ತೆ ಮರೆವು ಮರುಕಳಿಸಿ 

ಮರೆಯಾದ ಮಾತ್ರಕ್ಕೆ ಮಮ್ಮಲ ಮರುಗಿ 

ಮತ್ತಳಾದೆನೆಂದೇನೂ ಸುಮ್ಮನಾಗಿಸುವುದಲ್ಲ 

ಭದ್ರಕ್ಕೆ ಭಯದ ಬೇರಿಗೆ 

ಬಾರಯ್ಯ ಬಾರೋ ಬೇಗ ಬಾರೋ 

ಬಗೆ ಬಗೆ ಬಕುತಿಗೆ 

ಬಗೆ ಬಗೆ ಉರಿತಕ್ಕೆ 

ತೆರೆದ ಆ ಕ್ಷಣಕ್ಕೆ 

ತೆರೆಯಲೇ ಬೇಕಾದ ಈ ಭಾಗ್ಯಕ್ಕೆ 

ಕರೆಯದೆ ಕರಹಿಡಿದವಳ 

ಕಪಾಲದಲ್ಲಿ ಕಿರುಗುಡುವ 

ಆ ಕ್ರೀಗೆ  

ಲೆಕ್ಕದೆಲ್ಲಾ ಹಕ್ಕಿನ ಬಲೆಯ ಬಗೆಗೆ 

ಬಾರಕ್ಕೆ ಅತೀ ರಂಜಕತೆಗೆ 

ನಿಶ್ಚಿತತೆಯ ಪ್ರಪಂಚವು ಒಗ್ಗುವುದಿಲ್ಲ 

ಅನಿಶ್ಚಿತತೆಯೆ ಈ ವಿಶಿಷ್ಠ ವಿನ್ಯಾಸದ ಮೂಲ ಆಧಾರ 

ಕಣ್ಕಟ್ಟಿನಿಂದ ಹೊರದಬ್ಬುವ ಮಾರನ ಮಯೂರ 


ಮೂಲಾದಿಮೂಲದಲ್ಲಿರುವುದೇನಿದ್ದರೂ ಯಾದೃಚ್ಛಿಕತೆ 

ಅಲ್ಲಿಂದ ಸೇರಿದ್ದು ಒಪ್ಪ ಓರಣಗೊಂಡದ್ದು 

ಕ್ರಮದ ವ್ಯವಸ್ಥೆಯೊಂದೊಪ್ಪಿಕೊಂಡದ್ದು ಕೊಂಡಿಯಂತಾದದ್ದು 

ಅಪ್ಪಟ ಖೇಯೋಸ್ 

ಚೈತನ್ಯದಾಳದಲ್ಲಿ ಆ ವಿಕಾಸಕ್ಕೆಲ್ಲಾ 

ಮತ್ತೆಲ್ಲಾ ಸ್ವರೂಪದಾವರಣಕ್ಕೂ 

ಕಾರಣವಲ್ಲದ ಆದಿಕಾರಣವು ಕಾರಣ 

ಯಾದೃಚ್ಛಿಕತೆ  

ಆಯ್ಕೆಯಲ್ಲ ಉತ್ತರವಲ್ಲ 

ಚೈತನ್ಯದ ಸ್ವರೂಪವಡಗಿರುವುದಲ್ಲಿ 

ಸ್ವರೂಪವೆಲ್ಲವೂ ಚೈತನ್ಯವಾದುದಲ್ಲಿ 


 

ನೋಟವೂ….


ಕಾವ್ಯವು ನೆನಪನ್ನು ಕೆರಳಿಸುವುದು ಮಾತ್ರವಾಗಿರಬಾರದು ಮತ್ತೇನು ಎಂದರೆ ನೋಡುವುದು, ಆ ನೋಡುವುದನ್ನ ಕಲಿಯುವುದು, ಎಲ್ಲಕ್ಕೂ ಹೆಚ್ಚಾಗಿ ನೋಡುವುದಕ್ಕೆ ಅದೊಂದು ಮಾಧ್ಯಮ, ನೋಡುವುದರ ಸಾಧ್ಯತೆ ಇನ್ನೂ ಹೆಚ್ಚು. 


 ಪ್ರಶ್ನೆಗಳು ಆಳಕ್ಕಿಳಿಯದೇ ಹೋದಾಗ ಭಯವಾಗುತ್ತೆ. ಭಯವಾಗಬೇಕು. ಪ್ರಶ್ನೆ ಆಳದ್ದಾಗಿರಬೇಕು. ಉತ್ತರಕ್ಕೆ ಹಂತ ಹಂತವಾಗಿ ಏರುವುದಕ್ಕೆ ಅವಕಾಶ ಇರಬೇಕು. ಏರುವುದು ಮುಖ್ಯ. ಪದರ ಪದರವಾಗಿ ವ್ಯಕ್ತಗೊಳ್ಳುತ್ತಾ ಹೋಗುತ್ತೆ, ಹೋಗಬೇಕು. ಹಾಗೆ ವ್ಯಕ್ತಗೊಳ್ಳಲಿಕ್ಕೆ ಈ ಎಲ್ಲಾ ಪ್ರಶ್ನೆಗಳು. ಅದು ಏರಿ ಅಲ್ಲಿ ನಿಲ್ಲುವುದಕ್ಕಲ್ಲ. ಅಲ್ಲೇ ನಿಂತಾಗ ಸತ್ತಂತೆ. ಮುಂದೇನೂ ಇಲ್ಲ. ಇಲ್ಲೇ ಕೆಳಗೂ ಇರುವಂತಿಲ್ಲ. ಏರುವುದಕ್ಕೂ ಬೇಕು. ಒಟ್ಟೂ ಏರುವುದೂ ಇಳಿಯುವುದೂ ಇರುವುದೂ ಈ ಎಲ್ಲವುದರ ಸಂಭ್ರಮಕ್ಕೆ ಈ ಹುಡುಕಾಟಗಳು ಈ ಬರವಣಿಗೆಗಳು ಎಲ್ಲವೂ. ಆ ಸಂಭ್ರಮದ ಅನುಭವಕ್ಕೆ ನೋಡುವುದು ಮುಖ್ಯ. ಇಲ್ಲವಾದರೆ ಅದನ್ನ ನೋಡದೇನೇ ಹೋಗಿಬಿಡಬಹುದು. 


ಪ್ರಜ್ಞೆಗೆ ಸ್ಥಿತಿಗಳಿವೆ. ಅವು ಏರುತ್ತಾ ಹೋಗುತ್ತೆ. ನೆನಪಿರೋದು ಬಹಳ ಮುಖ್ಯ. ನೆನಪು ಅನ್ನೋದೇ ಬಹಳ ಮುಖ್ಯ. ಪ್ರಜ್ಞೆಯೇ ಪ್ರಜ್ಞೆಯನ್ನ ದಿಟ್ಟಿಸಬೇಕಾಗುತ್ತೆ. ಪ್ರಶ್ನೆಗಳು ತಿರುಗಿ ಬೀಳುವುದು ಆವಾಗಲೇ ನೋಡು. ಪ್ರಜ್ಞೆ ಇರಬೇಕು, ಅದರಲ್ಲಿ ಸ್ವ ಕಳೆದಿರಬೇಕು. ಸ್ವಪ್ರಜ್ಞೆ ಅಲ್ಲ ಸ್ವ ಇಲ್ಲದ ಪ್ರಜ್ಞೆ ಅಂತ ಗುರುಗಳು ಹೇಳೋರು.  ಆದರೆ ಅದು ಸಾದ್ಯವ? ಹಾಗೂ ಒಂದು ಸ್ಥಿತಿ ಉಂಟ? ನೋಟಕ್ಕೆ ಒಂದು ವಸ್ತು ದಕ್ಕುತ್ತೆ. ಉದಾಹರಣೆ ಆ ಕುರ್ಚಿ ಅನ್ನೋಣ. ಅದು ಕುರ್ಚಿ ಅಂತ ಗೊತ್ತಾಯ್ತು. ಅದೇ ರೀತಿ ಎಲ್ಲಾ ಗ್ರಾಹ್ಯಕ್ಕೂ. ಒಂದು ವಸ್ತು ಮತ್ತೊಂದು ಇಂದ್ರಿಯ. ಪ್ರಜ್ಞೆಯ ಮುಖಾಂತರ ಅದಕ್ಕೂ ನಮಗೂ ಒಂದು ಸಂಬಂಧ ಏರ್ಪಡೋದು. ನಾವು ಅದನ್ನ ಬರೀ ನೋಡಿದೆವ? ಎಲ್ಲಿಯವರೆಗೂ ನೋಡಿದೆವು, ಅಥವಾ ಕೇಳಿದೆವ ಎಲ್ಲಿಯವರೆಗೂ ಕೇಳಿದೆವು ಎಲ್ಲಾ ಒಟ್ಟಾದಾಗ ಅಲ್ಲೊಂದು ಸಂಬಂಧ.  ಹಾಗೆ ಸಂಬಂಧದ ಅರಿವಾದಾಗ ಅಲ್ಲೊಂದು ಸಂಭಾಷಣೆ. ಈ ಸಂಬಂಧ ಇಲ್ಲದ “ನನ್ನನ್ನು” ಹುಟ್ಟಿಸುತ್ತೆ. ಅದು ಬುದ್ದಿಯ ಕೆಲಸ. ಒಟ್ಟಿಗೆ ಒಂದು ವ್ಯಕ್ತಿತ್ವವನ್ನು, ಇನ್ನೂ ಹೆಚ್ಚಾಗಿ ಒಂದು ನೆನಪನ್ನು ಮೂಡಿಸುತ್ತೆ. ಆ ನೆನಪೇ “ಸ್ವ”. ಸ್ವಪ್ರಜ್ಞೆ ಹೀಗೆ ಕಟ್ಟಿಕೊಳ್ಳುತ್ತೆ. ನೆನಪ ರೂಪಗೊಳ್ಳದೆ ನಡೆವ ಸಂಭಾಷಣೆ ಉಂಟಲ್ಲ ಅದು ಪ್ರಜ್ಞೆ. ಸ್ವ ಇಲ್ಲದ ಪ್ರಜ್ಞೆ. ಇಲ್ಲಿನ ಒಂದು ಪ್ರಜ್ಞೆ, ಆ ಕಾಣುವ ಮತ್ತೊಂದು ಪ್ರಜ್ಞೆಯೊಡನೆ ನಡೆಸಿದ ಸಂಭಾಷಣೆ. ಆಗ ಅಲ್ಲಿನ ಆ ಕಲ್ಲು, ಆ ಕುರ್ಚಿ ನೇರವಾಗಿ ಸಂಭಾಷಿಸುತ್ತೆ. ಯಾವ ಭಾಷೆಯ ಹಂಗಿಲ್ಲದೆ. ಆ ಕಲ್ಲಿನದೇ ಭಾಷೆಯಲ್ಲಿ, ಆ ಖುರ್ಚಿಯದೇ ಭಾಷೆಯಲ್ಲಿ. ಹೀಗೆ ನಡೆವ ಸಂವಾದದಲ್ಲಿನ ಮಾತುಂಟಲ್ಲ ಅದು ಕಾವ್ಯವಾಗಬೇಕಿರೋದು. ನೆನಪನ್ನು ಕೆರಳಿಸುವುದು ಮಾತ್ರವಲ್ಲ. 


ರಿಲ್ಕೆಗೆ ಅದಕ್ಕೇ ಅನ್ನಿಸುತ್ತೆ. ನೋಡೋದರ ಬಗೆಗೆ ಅವನಿಗೆ ಆಸ್ಥೆ. ಬಹಳ ಬರೀತಾನೆ ನೋಡುವುದರ ಬಗೆಗೇನೇ. ಜಿಡ್ಡುಗೆ ಕೇಳುವುದರ ಬಗೆಗೆ ನೋಡುವುದರ ಬಗೆಗೆ ಅಷ್ಟೇ ಆಸ್ಥೆ  ಇತ್ತು. ಅನುಭವಿಸುವುದು ಅಂದರೆ ಇದು. ಸುಮ್ಮನೆ ನೋಡುವುದು, ಸುಮ್ಮನೆ ಕೇಳುವುದು, ಎಲ್ಲಾ ಸುಮ್ಮನೆ. ಸುಮ್ಮನೆ ಅನ್ನೋದು ಬಹಳ ದೊಡ್ಡ ಪದ. ಜೆನ್, ಬುದ್ದ ಇತರೆ ಸಂಪ್ರದಾಯಗಳಲ್ಲಿ ಈ ಸುಮ್ಮನೆಗೆ ಬಹಳ ಪ್ರಾಮುಖ್ಯತೆಯನ್ನ ನೀಡ್ತಾರೆ. ಬೇರೆ ಕಡೆಗಳಲ್ಲೂ ಕೊಡ್ತಾರೆ, ನಮಗೆ ತಿಳಿದಿರೋದಿಲ್ಲ ಅಷ್ಟೆ. 


ನೋಡುವುದೆಂದರೆ ? ಒಮ್ಮೆ ರೈಲಿನಲ್ಲಿ ಹೋಗಬೇಕಿತ್ತು. ರೈಲ್ವೆ  ನಿಲ್ದಾಣಕ್ಕೆ ಹೊರಟೆ. ಅಲ್ಲಿ ಒಬ್ಬ ಮದ್ಯವಯಸ್ಸಿನ ಹೆಂಗಸು, ಕುಳ್ಳಿ, ಉಬ್ಬು ಹಲ್ಲು ಫ್ಲಾಟ್ಫಾರ್ಮಿನ ಮೇಲೆ ಮಲಗಿದ್ದಳು. ಯಾಕೋ ಇದ್ದಕ್ಕಿದ್ದಂತೆ ಅವಳೆಡೆಗೆ ದೃಷ್ಟಿ ಹೋದಾಗ ಬಹಳ ಸುಂದರಳಾಗಿ ಕಂಡಳು. ಅಂದರೆ ಮನಸ್ಸಿಗೆ ಒಂದು ಬಗೆಯ ಹಿತ ಅವಳನ್ನ ಕಂಡಾಗ. ಮುದ್ದು ಮುದ್ದಾಗಿ ಕಾಣುವುದೇ. ಅದೇ ರೀತಿ ಅದೇ ದಿನ ಒಬ್ಬ ಗೂನು ಬೆನ್ನಿನ ಭಿಕ್ಷುಕ, ಅದೆಷ್ಟು ಮುದ್ದಾಗಿ ಕಂಡ ಅಂತೀನಿ. ಯಾರೂ ಯಾಕೆ ಅಷ್ಟು ಮುದ್ದಾಗಿ ಕಾಣಲಿಲ್ಲ. ಅವರೇನೂ ಮುದ್ದಾಗಿಲ್ಲವ. ನಾನು ನೋಡಲಿಲ್ಲ ಅಷ್ಟೆ. ಇಷ್ಟು ದಿನ ಯಾಕೆ ಕಾಣಲಿಲ್ಲ ಅನ್ನೋ ಪ್ರಶ್ನೆಯನ್ನೂ ಹಾಕಿಕೊಂಡಿದ್ದೀನಿ. ಕಾರಣ ಸುಲಭ, ನೋಡಲಿಲ್ಲ. ಯಾವಾಗಲೂ ಒಂದು ಹಕ್ಕಿಯನ್ನೋ, ಸಮುದ್ರವನ್ನೋ, ಆಕಾಶವನ್ನೋ ಹೀಗೆ ಕೂತು ನೋಡುವಾಗ ನಾನು ಕಳೆದು ಹೋಗುತ್ತಾ ಆಹಾ ಎಂದು ಅನುಭವಿಸುವಾಗಲೆಲ್ಲಾ ಇದನ್ನೇ ಕಾಣುವುದು ಎಂದು ಭಾವಿಸಿದ್ದೆ. ಆದರೆ ಅದನ್ನೂ ಮೀರಿ ಸಾದ್ಯ ಅಂತ ತಿಳಿದದ್ದೇ ಆಗ. ಇನ್ನೂ ಹೆಚ್ಚಾಗಿ ಹೀಗೆ ಹಿಂದೆ ನಾನು ಕಾಣುತ್ತಿದ್ದುದೆಲ್ಲಾ ಪೂರ್ವನಿರ್ದಾರಿತ ನೋಟಗಳಾಗಿತ್ತೇ ವಿನಃ ನಿಜದ ಇರುವನ್ನು ಕಾಣಲೇ ಇಲ್ಲ. ಅಂದರೆ ಇದ್ದದ್ದು ಇದ್ದಹಾಗೆಯೇ ಕಾಣುವುದು. ಹಾಗೆ ಕಂಡಾಗ ಹಾಗೆ ಕಂಡದ್ದನ್ನ ಸಾಧಿಸಿ ತೋರಿಸಬೇಕಿಲ್ಲ. ಆಗಲೇ ಬಯಕೆ ಹುಟ್ಟಿಬಿಡುತ್ತೆ. ಅರೆ, ನಾನು ಕಂಡೆನಲ್ಲಾ ಹಾಗೆ ಕಂಡಿದ್ದನ್ನೂ ನಾನು ಕಂಡಿದ್ದೀನೆಂದೂ ಸಾಧಿಸಬೇಕು ಅಂತ. ಅಲ್ಲಿಗೆ ಕಾಣುವುದೇ ಮುಗಿದಿರುತ್ತದೆ. ಹಾಗಾಗಿ ಕಾಣುವುದು ಒಂದು ವ್ರತ. ಕಾಣುವುದು ಸಾದ್ಯವಾದರೂ ಆ ಸಾದ್ಯತೆಯನ್ನ ತಿಳಿಗೊಡದೆ ನೋಡುತ್ತಾ ಇರಬೇಕಾಗುತ್ತೆ. ನೀನು ಏನನ್ನೋ ಕಂಡಿದ್ದೀಯೆಂದರೆ ಹಾಗೆ ಕಂಡದ್ದು ನನಗೆ ತನ್ನನ್ನು ತಾನಾಗೆ ತೋರಿಸಬೇಕೆಂದು ನಿರ್ಧರಿಸುವುದರಿಂದ ಮಾತ್ರ ಸಾದ್ಯ ಆದದ್ದು ಅನ್ನೋ  ಎಚ್ಚರಿಕೆಯಲ್ಲಿರಬೇಕು. ಅದು ಒಂದು ಬಗೆಯಲ್ಲಿ ತೀರಾ ತೀರಾ ವೈಯುಕ್ತಿಕ. ಅದರ ವೈಯುಕ್ತಿಕತೆಯನ್ನೂ ನೀನು ಗೌರವಿಸಬೇಕು. ಹಾಗಾಗಿ ಕಂಡದ್ದು ತನ್ನನ್ನು ಹೀಗೆ ತೋರಿಸು ಎಂದು ಹೇಳಿದರೆ ತಪ್ಪ ಅದನ್ನ ತೋರಿಸಲಿಕ್ಕೆ ಹೋಗಬಾರದು. ಹಾಗೆ ಹೋದಾಗ ಕಂಡದ್ದು ಮತ್ತೇ ನಿನೆಗೆಂದಿಗೂ ಕಾಣೋಲ್ಲ. It has its own privacy. You need to respect it. 


ನಾವು ಯಾಕೆ ನೊಡೋಲ್ಲ? ನಮ್ಮನ್ನೇ ನಾವು ಯಾವಾಗಾದರೂ ನೋಡಿಕೊಂಡಿದ್ದೇವೆಯೆ? ಭೌತಿಕವಾಗಿಯಾದರೂ ಅದೆಷ್ಟು ಜನ ನೋಡಿಕೊಂಡಿರುವರು. ಪೂರ್ತಿ ಬೆತ್ತಲೆಯಾಗಿ ತನ್ನ ಇಡೀ ದೇಹವನ್ನು ನೋಡಿಕೊಂಡಿದ್ದಾರ? ಕನ್ನಡಿಯ ಮುಂದೆ ಬೆತ್ತಲೆಯಾಗಿ ನೋಡಿಕೊಂಡಿದ್ದಾರ? ತನ್ನ ಒಂದೊಂದು ಕಾಣುವ ಅಂಗಗಳೊಂದಿಗೆ ನೋಡುತ್ತಾ ಮಾತನಾಡಿದ್ದಾರ? ಇನ್ನು ಒಳಹೊಕ್ಕಿ ನೋಡುವ ವಿಷಯ ಭಾರೀ ದೊಡ್ಡ ಮಾತು. ನೋಡುವುದೇಕೆ ಅಷ್ಟು ಕಷ್ಟ, ಹೆದರಿಕೆ. ನೋಡುವುದರಲ್ಲಿ ಭಾಗಿಯಾಗಲು ಸಾದ್ಯವಾಗದೇ ಹೋಗೋದು. ನಮಗೆ ಬೇರೆಯವರು ನಮ್ಮನ್ನ ನೋಡಲಿ ಅನ್ನೋ ಬಯಕೆ, ಅದೇ ಧ್ಯಾಸ. ನಮಗೇ ನಮ್ಮನ್ನು ಬೇರೆಯರು ನೋಡಲಿ ಅನ್ನೋ ಬಯಕೆ ಇರಬೇಕಾದರೆ, ನಾವು ನಮ್ಮೆನ್ನೆಲ್ಲಿ ಕಂಡೇವು . ನಮ್ಮನ್ನು  ಬೇರೆಯವರು ನೋಡಬೇಕು ಅನ್ನೋ ಬಯಕೆ ಹೋದಾಗ ನಮಗೆ ನಾವು ನಮ್ಮನ್ನ ನೋಡಬೇಕು ಅಂತ ಅನ್ನಿಸಲಿಕ್ಕೆ ಸಾಕು. ಆಮೇಲೆ ನಾವು ಬೇರೆಯವರನ್ನ, ಬೇರೆಯದನ್ನ ಕಾಣಲು ಆರಂಭ ಮಾಡ್ತೇವೆ.


ಒಂದು ತಿರುವಿನಲ್ಲಿ ಎಲ್ಲಾ ಪ್ರಶ್ನೆಗಳೂ ಒಟ್ಟುಗೂಡುವಾಗ, ಒಟ್ಟುಗೂಡಿರುವಾಗ ಎಲ್ಲಕ್ಕೂ ಉತ್ತರವೆಂಬಂತೆ ಒಂದೇ ಉತ್ತರ ಪ್ರತ್ಯಕ್ಷವಾದರೆ ಹೇಗಿರುತ್ತೆ? ಕಾವ್ಯ, ವಿಜ್ಞಾನ ಬದುಕು ಮೂರೂ ಬೇರೆಬೇರೆಯಲ್ಲ, ಮೂರರ ಉದ್ದೇಶವೂ ಒಂದೇ ಎಂಬುದು. ಆ ಉದ್ದೇಶದ ಸ್ಪಷ್ಟತೆ ತೆರೆದುಕೊಂಡರೆ ಅದೆಷ್ಟು ಸಂಭ್ರಮ. ನೋಡಲ್ಪಟ್ಟಿದ್ದು ಅದನ್ನು “ವಸ್ತು” ಎಂದು ಕರೆಯಬಹುದು. ವಸ್ತು ಅಂದ ತಕ್ಷಣ ಕೇವಲ ಭೌತಿಕವಾದದ್ದು ಮಾತ್ರ ಕಾಣುವುದರಿಂದ,   ಸ್ವಲ್ಪ ವಿಸ್ತರಿಸಿ “ನೋಡಲ್ಪಟ್ಟಿದ್ದು” ಎನ್ನೋಣ. ಹಾಗೆ ನೋಡಲ್ಪಟ್ಟಿದ್ದು ಏನಾದರೂ ಆಗಿರಬಹುದು. ವಸ್ತು, ಗಣಿತೀಯ ಸಮೀಕರಣ, ಭಾಷೆ, ಕಾವ್ಯ, ಸಿದ್ಧಾಂತ, ಇತ್ಯಾದಿ. ಎಲ್ಲವೂ ನೋಡಲ್ಪಟ್ಟಿದ್ದು. ನೋಡುಗನನ್ನು ಹೆಚ್ಚು ವಿಷ್ಲೇಷಣೆಗೆ ಹಚ್ಚುವುದಿಲ್ಲ. ಅದರ ವ್ಯಾಖ್ಯಾನ ಅಸ್ಪಷ್ಟ. ಹಾಗಾಗಿ “ನೋಟ” ಎನ್ನುತ್ತೇನೆ. ನೋಟ ಎಂದರೆ ನೋಡಲ್ಪಟ್ಟಿದ್ದರಿಂದ ಉಂಟಾಗುವ ಅನುಭವ. ನೋಟ ಎಂಬುದು ಅನುಭವಕ್ಕಿಂತ ಸ್ವಲ್ಪ ಹಿರಿದಾದದ್ದು. ನೋಟವೆಂನುದು ನಿಜದಲ್ಲಿ “ಕಂಡದ್ದು”. ನೋಟ ಹಾಗೂ ನೋಡಲ್ಪಟ್ಟಿದುದರ ನಡುವೆ ಒಂದು ಕೊಂಡಿ ಭಾಷೆ. ಹೀಗೆ ನೋಡಲ್ಪಟ್ಟಿದ್ದು ಉಂಟುಮಾಡುವ ನೋಟವು ತಕ್ಕಮಟ್ಟಿಗೆ ಭಾಷೆಯಲ್ಲಿ ಅಭಿವ್ಯಕ್ತಿಗೊಳ್ಳುತ್ತೆ. ನೋಡಲ್ಪಟ್ಟದ್ದು ಎರಡುರೀತಿಯಲ್ಲಿ ನಮ್ಮನ್ನ ಪ್ರಭಾವಿಸಿ ಎರಡು ಬಗೆಯ ಭಾಷೆಯಲ್ಲಿ ವ್ಯಕ್ತಿಗೊಳ್ಳುತ್ತೆ. ಒಂದು ತಾರ್ಕಿಕವಾದದ್ದು, ಮತ್ತೊಂದು ಅತಾರ್ಕಿಕವಾದದ್ದು. ಎರಡೂ ಭಾಷೆಯೇ. ತಾರ್ಕಿಕವಾದ ಭಾಷೆ ಗಣಿತವಾಗಿಯೂ ಅತಾರ್ಕಿಕ ಭಾಷೆ ಕಾವ್ಯವಾಗಿಯೂ ಹೊಮ್ಮುತ್ತದೆ. ಇಲ್ಲಿ ಕಾವ್ಯ ಎಂಬುದನ್ನು ವಿಶಾಲ ಅರ್ಥದಲ್ಲಿ ಎಲ್ಲಾ ಬಗೆಯ ಸಾಹಿತ್ಯ, ಕಲೆಗೆ ಅನ್ವಹಿಸಬಹುದು. ಕಾವ್ಯ ವೈಯುಕ್ತಿಕವಾದದ್ದು ವಿಜ್ಞಾನ ಸಾರ್ವತ್ರಿಕವಾದದ್ದು. ಆದರೂ ಎರಡೂ ಭಾಷೆಯೆ. ಭಾಷೆಯಲ್ಲದೆ ಮತ್ತೇನೂ ಅಲ್ಲ. ಇವೆರೆಡೂ ಭಾಷೆಯಾಗಲಿಕ್ಕ ಕಾರಣವೇ ಬದುಕು ಭಾಷೆಯಾಗಿರುವುದರಿಂದ. ಹಾಗಾಗಿ ಕಾವ್ಯ, ವಿಜ್ಞಾನ, ಬದುಕು ಮೂರೂ ಭಾಷೆಯೆ. ಯಾವುದರ ಭಾಷೆ? ಆ “ನೋಟದ” ಭಾಷೆ. ನೋಟ ವ್ಯಕ್ತಗೊಳ್ಳಲು ತಾನೆ ನಿರ್ಮಿಸಿಕೊಂಡದ್ದು ಈ ಭಾಷೆ. ಅದು ಅದರ, ಆ ನೋಟದ ಭಾಷೆ.   ನೋಡುವುದಿದೆಯಲ್ಲ, ಅದಕ್ಕೆ, ಆ ಎಚ್ಚರ ಬೇಕು. ನೋಡುವ ಎಚ್ಚರ ಬೇಕು. ಆಗಲೇ ನೋಡಿರುವ ಆ ಎಲ್ಲಾ ನೋಟಗಳನ್ನೂ ಮೀರಿ, ಆ ನೋಟಗಳೆಲ್ಲವನ್ನೂ ಮೀರಿ, ದಾಟಿ, ಹೋಗಲಿಕ್ಕೆ ಸಾದ್ಯ. ಅದು ಕಾವ್ಯದಲ್ಲಿರಬಹುದು, ವಿಜ್ಞಾನದಲ್ಲಿರಬಹುದು, ಹಾಗೆ ನೋಡುವುದಿದೆಯಲ್ಲ ಅದೇ ಮನುಷ್ಯನಾಗಿ ನಮ್ಮನ್ನು ವ್ಯಾಖ್ಯಾನಿಸುವುದು. ಹಾಗಾಗಿಯೇ ನೋಡುವ ಆ ಎಚ್ಚರ ಕೇಂದ್ರ ಸ್ಥಾನವನ್ನು ಸ್ವೀಕರಿಸುತ್ತೆ. ನೋಡುವ ಬಗೆಗಳು ಹಲವಿಹುದು. ಅದು ಆಯಾ ವ್ಯಕ್ತಿಗೆ ಆಯಾ ಸಂದರ್ಭಕ್ಕೆ ತಕ್ಕದ್ದು. ಆದರೆ ಎಲ್ಲದರಲ್ಲೂ ಹೊಸದನ್ನ ಕಾಣಬಲ್ಲ ಆ ಸ್ಥಿತಿ ಉಂಟಲ್ಲ ಅದು  ಆ ಎಚ್ಚ್ಚರಕ್ಕೆ ಮಾತ್ರಾ ಸಾದ್ಯ ನೋಡು. ಹಾಗಾಗಿಯೇ ಸತ್ಯ ಎಚ್ಚರಕ್ಕೆ ಕಂಡದ್ದು. 


ವಾಸ್ತವ ಅನ್ನೋದು ಅಲ್ಲಿರುವುದಲ್ಲ. ಅದು ಭಾಷೆಯಲ್ಲಿ ಕಟ್ಟಿರುವುದು. ಭಾಷೆಯ ಮೂಲಕ ನಾವು ಕಂಡದ್ದು. ಹಾಗಂತ ಅದು ನಮ್ಮ ತಲೆಯಲ್ಲಿರುವುದಲ್ಲ. ಭಾಷೆ ನಮ್ಮ ತಲೆಯಲ್ಲಿ ಮಾತ್ರಾ ಇರೋದಲ್ಲ. ಭಾಷೆಯು ಜಗತ್ತಿನ ಭಾಗ. ಅದರ ಭಾಗವಾಗಿಯೇ ನಾವು ವಾಸ್ತವ ಅನ್ನುವುದನ್ನ ಕಾಣುತ್ತಿರುವುದು. ಭಾಷೆಯ ಮೂಲಕ ಮಾತ್ರಾ ಜಗತ್ತನ್ನ ಕಾಣುವುದಲ್ಲ, ಅದನ್ನ ಮೀರಿ ಭಾಷೆಯ ಮುಖಾಂತರವೇ ಭಾಷೆಯನ್ನ ಮೀರಿ, ಆ ಭಾಷೆಯನ್ನ ಎಚ್ಚರದ ಭಾಗವಾಗಿಸಿದಾಗ ಆ ಭಾಷೆಯೇ ನಿಜದ ಜಗತ್ತನ್ನ ತೋರಿಸುತ್ತೆ. ಅದು ನೋಡುವುದು. ಆಗ ಕಂಡದ್ದು ಮತ್ತೇ ಭಾಷೆಯಲ್ಲಿ ಕಾಣಲಿಕ್ಕೆ ಶುರುವಾಗುವುದು. ಇದು ಬಹಳ ಸೂಕ್ಷ್ಮ. ಹಾಗಾಗಿ ಬದುಕಿನ ಪ್ರಶ್ನೆ ಬಂದಾಗ, ಬದುಕುವುದು ಎಂದರೆ ಏನು? ಬದುಕಿನ ಉದ್ದೇಶ ಅಂದರೆ ಏನು ಎನ್ನುವುದಕ್ಕೆಲ್ಲಾ ಉತ್ತರ ಸರಳ. ಎಚ್ಚರವಾಗಿ ಕಾಣುವುದು, ನೋಡುವುದು, ಆ ಎಚ್ಚರವೇ ಆಗುವಂತೆ ಕಾಣುವುದು. ಈ ನೋಡುವುದು, ನೋಡಲ್ಪಡುವುದು, ಭಾಷೆ ಹಾಗು ಭಾಷೆಯಾಗುವುದು ಈ ಎಲ್ಲವುದರ ಸಹಸಂಬಂಧಕ್ಕಾಗಿಯೇ ನನ್ನ ಇರುವಿಕೆ. 


ಒಂದು ರೀತಿಯ ಸಾಧಿಸಬೇಕು ಅನ್ನೋದು. ಯಾರಿಗೋ ಸಾದಿಸಿ ತೋರಿಸಬೇಕು ಅಂತ. ಅಥವಾ ಯಾರೋ ನನಗೆ ಗೌರವ ಕೊಡುತ್ತಿಲ್ಲ ಅಂತ, ನನ್ನನ್ನ ತಿರಸ್ಕರಿಸುತ್ತಿದ್ದಾರೆ ಅಂತ ಬೇಸರಿಸಿಕೊಳ್ಳಬೇಕು. ಯಾರಿಗಾದರೂ ಎಂದಿಗಾದರೂ ನಾವು ಕಾಣುತ್ತೇವೆಯೆ? ಇಷ್ಟಕ್ಕೂ ಈ ನಾನು ಎಂದರಾದರೂ ಏನು, ನಮಗೆ ಯಾರೋ ಗೌರವ ಕೊಡುತ್ತಿಲ್ಲ ಅಂತ ಆದರೂ ಏನದು. ನಾನು ಎಂಬುದೆಲ್ಲವೂ ಕಟ್ಟಿಕೊಂಡಿರುವುದು. ಅದರಲ್ಲಿ ಏನೂ ಅಂತ ಮಹತ್ವ ಇಲ್ಲ. ಹೀಗೆ ಕಟ್ಟಿಕೊಂಡಲ್ಲದ್ದು ನಿಜವಾಗಿ ಇರುವುದು ಕಾಣಲಿಕ್ಕೆ ಬೇಕು. ಹಾಗೆ ಕಾಣಲಿಕ್ಕೆ ಮೊದಲಿಗೆ ನಮಗೆ ತಿಳಿಯಬೇಕಾಗಿರುವುದೆಂದರೆ ನಾವೆಂಬುದು ಏನೂ ಅಲ್ಲ. ಏನೆಂದರೆ ಏನೂ ಅಲ್ಲ. ಸ್ವಪ್ರಾಮುಖ್ಯತೆ ಕಳಚದೆ, ನಮ್ಮನ್ನ ನಾವು ಕಳಚಿಕೊಳ್ಳದೆ ನಾವು ಕಾಣುವುದು ಇರುವುದು ಇದ್ದಹಾಗೆ ಕಾಣಲಿಕ್ಕೆ ಸಾದ್ಯವಿಲ್ಲ. ಇಲ್ಲಿಯೇ ನಾವು ಬತ್ತಲಾಗುವುದು, ಇಲ್ಲಿಯೇ ಇದನ್ನ ನಾವು ಬಯಲು ಅನ್ನೋದು. ಹಾಗೆ ಬಯಲಿಗೊಗ್ಗಿಕೊಳ್ಳದೆ ಬಯಲು ಕಾಣದೆಂಬುದೂ ಇದೇ ಲೆಖ್ಖದಲ್ಲಿ. 
                                                ಇಂತಿ

                                                      ಅಭಿಧಾ  


ಅದರೊಳಹೊಕ್ಕು ಅದಾಯಿತು ಹಕ್ಕಿ ಮೀನು

 

ಇದೂ ರೆಕ್ಕೆಯೆಂದೇ ಎನ್ನಿಸಿದರೂ 

ನೀರಿನಿಂದೆದ್ದು ಆಕಾಶಕ್ಕೆಗರಲಿಕ್ಕೆ 

ರೂಪಾಂತರಕ್ಕೆ ತಕ್ಕ ತಯಾರಿ 

ಆ ನಡುವಲ್ಲಿನ ವಿರಾಮ 

ಪಕ್ಕನೆ ಜೀವ ತೆಗೆದು 

ತೊಡಿಸುವ ಆವೇಗಕ್ಕೆ 

ಹೊಂದಿ ನಡೆಯಬೇಕಲ್ಲ 

ಬರೀ ಮೂಳೆಯೆಂದೆನಿಸುತ್ತಿದ್ದರೂ 

ಕೊಕ್ಕು ಕಾಲುಗಳ ಪಡೆದು 

ಮಾಂಸತುಂಬಿ ಗಾಳಿಗುಬ್ಬಿ 

ಹಾರಬೇಕು 


ಮೀನಿಂದ ಹಕ್ಕಿಯಾಗುವುದು 

ಸುಲಭವೇನೂ ಅಲ್ಲ 

ಹಕ್ಕಿಯಿಂದ ಮೀನಾಗುವುದೂ 


ಮೇಲಿಂದ ಕೆಳಗೆ ಹಾರಬೇಕಷ್ಟೆ 

ಮುಳುಗಿದಾಗ ಉಸಿರಿಡಿದುಕೊಳ್ಳುವ ಗುಣ 

ಎಲ್ಲಾ ಹಕ್ಕಿಗಳ ಪಾಡೇನೂ ಅಲ್ಲ 

ಹೀಗಿರಲಾಗಿ 

ಗಾಳಿತೊರೆದು ನೀರೊಳಗವಿತುಬಿಡುವ 

ಈ ರೂಪಾಂತರದ ನಡುವಲ್ಲೂ 

ಜೀವ ತೆಗೆದು ತುಂಬುವ 

ಕಾರುಣ್ಯಕೆ ಸವಾಲೆಸೆಯುವ ಕಠೋರತೆಯನ್ನ

ನೇವರಿಸಿ ಮೈದಡವಿ ಮುದ್ದಿಸಿ 

ಹೋಗಬೇಕು 

ನೀರು ಆಳ-ಅಗಲಕ್ಕೆ  ಪ್ರಸಿದ್ಧಿ

ತೇಟ್ ಆಕಾಶದಂತೆಯೇ ಆದರೂ 

ದೇಹ ಕ್ರಮ ಪರಿಕ್ರಮ ರಚನಾ ವ್ಯೂಹಕ್ಕೆ 

ಬೇರೆಯದೇ ಜಂಜಾಟವಿದೆಯಾದರೂ 


ಮೀನಾಗಿದ್ದೇನೆಂದು ತಿಳಿದದ್ದೇ 

ಮುಳುಗಿದಾಗ ಉಸಿರಾಡದೆ ಹಾಗೇ  ಹೋಗಬಹುದು 

ಮೀನಿಗೂ ಅಷ್ಟೇ 

ಹಕ್ಕಿಯಾದೇನೆಂದು ನೀರಿನಿಂದ ಹಾರಿದಾಗ 

ಮತ್ಯಾವುದೋ ಹಕ್ಕಿ ಹಾಗೇ ಕಚ್ಚಿಕೊಂಡು 

ಹೋಗಿಬಿಡಬಹುದು 

ಹಾರುತ್ತಿದ್ದೇನೆಂದೋ ಈಜುತ್ತಿದ್ದೇನೆಂದೋ 

ಅನ್ನಿಸುತ್ತಿರುವಾಗಲೇ 

ಉಸಿರುನಿಂತು ಸಾಯುವುದು ಮಾಮೂಲು ಸಂಗತಿ 


ಪೂರಾ ಬದಲಾಗಬೇಕು  ಇದ್ದಕ್ಕಿದ್ದಂತೆ 

ಎಲ್ಲಾ ಮಾಂಸ ಮೂಳೆ ಹರಿದು ಕೊರೆದು ಹಂಚಬೇಕು 

 ರೂಪಾಂತರದ ಕ್ಷಣದಲ್ಲಿನ 

ಆ ನೋಟ ಆ ನೋವು  ಆ ಆನಂದ 

ಅರ್ಧ ಮೀನು ಅರ್ಧ ಹಕ್ಕಿ ಆದದ್ದಿದೆಯಲ್ಲ 

ಅದುವೇ ಸಾಕ್ಷಿ  


ಈ ನಡುವಲ್ಲಿ 

ಹಕ್ಕಿ ಮೀನಾಗುವ ಮೀನು ಹಕ್ಕಿಯಾಗುವ 

ಆ ಜಾಗದಲ್ಲಿ 

ಎರಡೂ ಸಂದಿಸುತ್ತಿದೆಯಲ್ಲಾ 

ಅಲ್ಲಿ ಅವುಗಳೆಂದವು 

ಆಕಾಶಕ್ಕೂ ಸಾಗರಕ್ಕೂ ಭಿನ್ನವೇನಿಲ್ಲ 

ಅಲ್ಲೆಲ್ಲೋ ಈಜುವುದು  ಇನ್ನೆಲ್ಲೋ  ಹಾರುವುದು 

ಎರಡೂ ವಿಶೇಷವೇನೂ ಅಲ್ಲ 


ಇಷ್ಟಾದರೂ 

ಹಕ್ಕಿಗೆ ಮೀನಾಗಿಯೂ 

ಮೀನಿಗೆ ಹಕ್ಕಿಯಾಗಿಯೂ 

ಆಗುವಾಸೆ 


ಇಷ್ಟೆಲ್ಲಾ ಯಾಕೆಂದರೆ 

ಒಂದು ಮತ್ತೊಂದಾಗುವುದು 

ಬರೀ ರೂಪಾಂತರವಷ್ಟೇ ಅಲ್ಲವಲ್ಲ 


ಸಾಮಗಾನ


ಆಹೋ ಆಹೋ ಆಹೋ 

ನೋಡಲ್ಲಿ ಕೇಳಲ್ಲಿ ಉಸಿರಲ್ಲಿ 

ಬಯಕೆ ಕಟ್ಟಿ ಮೊರೆವಲ್ಲಿ 

ಬೇಡವೆಂಬುದು ಬೆಂಬಿಡದಂತೆ 

ಒಳಗೆಲ್ಲೋ ಹೊಕ್ಕು 

ಹೊತ್ತು ಹೊತ್ತು ತಿರುಗುವಾಸೆಗೆ 

ಇಣುಕು ನೋಟಕ್ಕೆ 

ಬೇರೆಯದೇ ಬೇಸರ 

ಸಾಕುಮಾಡೆನ್ನದಿರು ಈ ಪ್ರಲಾಪ 

ಮೈಯಲಿಲ್ಲ ನೀರು 

ಉಟ್ಟಬಟ್ಟೆ ಜೊತೆಗಿಲ್ಲ 

ಓಟಕ್ಕೆ ಕಾಲು ಸವೆದಿಲ್ಲ 

ಉರಿವ ಬೆಂಕಿ ಮುಂದೆ 

ಹೊಕ್ಕವಳು ನೀನು 

ಕತ್ತರಿಸಿದವಳು ನೀನು 

ಉಳಿದದ್ದೇನು ಮತ್ತೆ ? 

ಆಹೋ ಆಹೋ ಆಹೋ 

ಎಂಬೀ ಹಾಡಲ್ಲವೆ 

 

ಹಾರೈಕೆ


ದೇಹದೊಳಹೊಕ್ಕು ಕಾಣುವ 

ಸಾಧನಗಳ ಪರಿಣತಿಯ ತಾಂತ್ರಿಕನಾದರೂ 

ನಿನ್ನವಳ ಮನಹೊಕ್ಕು 

ಕಾಣುವುದೇನೂ ಸುಲಭವಲ್ಲ ಗೆಳಯ 

ಕಂಡುಕೋ  ಈ ಹೊತ್ತಲಿ 

ಹೊಸಹಾದಿಯಾದಿಯಲಿ 

ಕೈ ಹಿಡಿವವಳ ಬಳೆ ಸದ್ದು ಕಣ್ಣ ನೋಟ 

ನಿಮಿರಾಗಿ ತೀಡಿದ ಕೆಂಪು ನಾಮ 

ಜಾಗರೂಕನಾಗಿ ನೋಡಿಕೋ ಗೆಳೆಯ 


ನಿನ್ನ ನಾಚಿಕೆಯ ಬಲ್ಲೆ ನಾನು 

ಯಾವುದೋ ಪಯಣದಲಿ 

ಅವಳ ಸನಿಹದಲಿ 

ಮೈಗೆ ಮೈ ತಾಕಿದಾಗ 

ಯಾರೋ ಕಂಡದ್ದು ಕಂಡು 

ನಾಚಿದ್ದು ನೆನಪಿದೆ 

ಇನ್ನು ನಿನ್ನ ದೇಹವಿಲ್ಲ ಗೆಳಯ 

ಇನ್ನೇನಿದ್ದರೂ ಅದು ಅವಳದು 


ಆಕಾಶದೆಲ್ಲಿಯದೋ ನಕ್ಷತ್ರವನು 

ನೀ ತೋರಿದ್ದಾ? ಅವಳು ಕಂಡದ್ದೆಂದದ್ದಾ? 

ಜೊತೆಗಿರಲಿ ಆ ಮುದ್ದಾದ ಸುಳ್ಳು 

ಕಾಲದಕ್ರಮದೊಟ್ಟಿಗೆ ಬದಿ ಸರಿದು 

ನಿಲ್ಲಬೇಕಾದೀತು - ಬೇಸರ ಬೇಡ 

ಮನದಲಿರಲಿ ಅವಳ ಮುಗುಳು ನಗೆ 


ಎಚ್ಚರಿಕೆಯು ಬರೀ ಸಂಜ್ಞೆಯಲ್ಲ 

ಸೂಚನೆಯಲ್ಲ 

ದೇಹ ಮನಸ್ಸುಗಳೆರಡೂ ಹದ ತಪ್ಪಿ 

ಹುಚ್ಚಾಟದೆಲ್ಲಾ ಅಂಕೆಗಳ 

ಅಂಕಕ್ಕೊಪಿಸಿದಂತೆ ಕುಣಿಯಬಲ್ಲದು 

ಹಿಡಿದ ಕೈ ನೆನಪಿರಲಿ ಗೆಳೆಯ 

ಬದುಕ ಎಚ್ಚರದಾಚಾರಕ್ಕೆ ಒಗ್ಗಿಸಿ 

ಕಾಣು 

ಅವಳ ಉಸಿರ ಸನಿಹ 

ನೆನಪಿಸಿಕೊ ಜೊತೆಗಿಟ್ಟ ಆ ಏಳು ಹೆಜ್ಜೆ 

ಬರಿ ಹೆಜ್ಜೆಯಲ್ಲವದು - ನಡಿಗೆ 


ಹಾರೈಸುತ್ತೇನೆ ಗೆಳೆಯ 

ಹಸಿ  ಮಣ್ಣ ನೆಲವಿದೆ ಕೆಳಗೆ

ಕುಣಿದಂತೆ ರೂಪತಾಳ್ವ ಆವೇಶಕ್ಕೆ 

ಆರದ ಆರ್ಧ್ರತೆಯ ಆದರ 

ಬೆನ್ನ ನೇವರಿಸುವ ಕೈಗದುವೇ ಆಧಾರ 

ಕುಣಿದಾಡಿ ಒಟ್ಟಿಗೆ ಕುಣಿದಾಡಿ 

ಮೈಮನವು ದಣಿವಂತೆ 

ಮರೆತು ನೆನವಂತೆ 

ಕುಣಿದಾಡಿ 

ಕಿರುಬೆರಳು ಜೊತೆಯಾಗಿ  

ಕುಣಿತವೇ ಹರಕೆಯಾಗಿ   

ಕುಣಿದಾಡಿ ಗೆಳೆಯ ಕುಣಿದಾಡಿ 


[ಗೆಳೆಯ/ತಮ್ಮನ ಮದುವೆ ನಿಶಿತಾರ್ಥಕ್ಕೆ ಶುಭ ಹಾರೈಸುತ್ತ ಬರೆದ ಕವಿತೆ]