.......

ಮಳೆಗೆ ಮುಖವೊಡ್ಡಬೇಕು,
ಎದುರಿಗೆ ನದಿ ಹರಿಯುತ್ತಿರಬೇಕು, ಇಲ್ಲವ ಸಮುದ್ರವಿರಬೇಕು, ಅಥವಾ ದಟ್ಟ ಕಾಡಮಧ್ಯದಲ್ಲಿರಬೇಕು,
ನಿನ್ನೊಡಲಾಳದಲ್ಲಿ ಕಾವು ಪಡೆಯಲಿಕ್ಕೆ.
ಹುಡುಗೀ, ನಾನು ನೀನೇ ಇಟ್ಟ ಮೊಟ್ಟೆ
ಒಡೆಯಲಿ ಬಿಡು ಪ್ರಾಕೃತಿಕವಾಗಿ ನೀ ನೀಡ್ವ ಕಾವುಗೆ
ನೋಡು, ನೀನೇ ನೋಡು, ಮರಿಯಲ್ಲ,
ಸಹಸ್ರಾಕ್ಷ ಪುರುಷ ನಾನೇ ಅದು.
ಪ್ರಕೃತಿಯೆ ಸಾಕ್ಷಿ, ಅದುವೇ ಪ್ರಜ್ಞೆ

.......

ಬುದ್ಧ ಹಾಗೇ ಕೂತಿದ್ದ.
ಹೇ.., ತಥಾಗತ  ಹೇ.., ತಥಾಗತ
ಬುದ್ಧ ಹಾಗೇ ಕೂತಿದ್ದ.
ಮೃಣನ್ಮಯಿ, ಸಾಲಿನ ಅರ್ಥ ಕೇಳುತ್ತಾರೆ
ಬುದ್ಧನನ್ನ ಅಲ್ಲೇ ಬಿಟ್ಟು ನಾ ನೆಡೆದು ಬಿಟ್ಟೆ.

.......

ಅರ್ಥ ಎಂದರೆ?
ಕತ್ತಲ ರಾತ್ರಿಯಲ್ಲಿ,
ಎಲೆ ಉದುರಿದ ಮರದ ಕೆಳಗಲ್ಲಿ,
ನಿಂತು
ತಲೆಯಿತ್ತಿ ಕಂಡಾಗ
ನಕ್ಷತ್ರಗಳೆಲ್ಲಾ ಬಂದಿಸಲ್ಪಟ್ಟಂತೆ ಕಂಡವು

ಅನಂತ ಸ್ವಾತಂತ್ರ್ಯದೆಡೆಗೆ......


ನನ್ನ ಬದುಕಿನ ಅರ್ಥವೇನು? ಇಷ್ಟಕ್ಕೂ ಮನುಷ್ಯ ಬದುಕಿಗೆ ಅರ್ಥ ಎಂಬೋದು ಇದೆಯ? ಯಾವುದು ನನ್ನನ್ನು ಈ ಹುಟ್ಟಿನ ಸಾರ್ಥಕ್ಯವನ್ನ ನಿರೂಪಿಸುತ್ತದೆ? ಪ್ರತೀ ಬಾರಿಯೂ ನಾನು ಇಡುವ ಪ್ರತೀ ಹೆಜ್ಜೆಯ ದಿಕ್ಕನ್ನ ಈ ಪ್ರಶ್ನೆಗಳು ನಿಯಂತ್ರಿಸುತ್ತಿವೆ. ಬದುಕಿನ ಅರ್ಥವನ್ನ ಅರಿಯುವುದಲ್ಲದೆ ಈ ಬದುಕಿಗೆ ಉದ್ದೇಶವೇ ಇಲ್ಲ ಎಂದು ಒಂದು ದಿಕ್ಕಿನಲ್ಲಿ ಅನ್ನಿಸಿದರೆ, ಮತ್ತೊಂದು ದಿಕ್ಕಿನಲ್ಲಿ ಮನುಷ್ಯ ಬದುಕಿಗೆ ಅರ್ಥ ಎಂಬೋದು ಇದೆಯಾ ಅನ್ನೋ ಪ್ರಶ್ನೆಯೂ ಸೇರುತ್ತದೆ. ಒಟ್ಟಿನಲ್ಲಿ ಸದ್ಯ, ಬದುಕಿನ ಧ್ವನಿ ಗ್ರಹಿಕೆಯ ಮಾರ್ಗಗಳನ್ನ ಹುಡುಕಿ ಹೊರಟವನಿಗೆ ಧ್ವನಿ ಗ್ರಹಿಕೆಗೆ ಯಾವುದೇ ಮಾರ್ಗಗಳಿಲ್ಲ ಎಂಬೋ ಹಂತಕ್ಕೆ ಬಂದಿದ್ದೇನೆ. ಅದರೂ ಬದುಕು ಎಂಬೋದು ಅತ್ಯಂತ ನಿಗೂಢವೂ ಸಂಕೀರ್ಣವೂ ಆದ ಸಂರಚನೆಯಾಗಿದೆ. ಹೀಗೆ ಯಾವುದೋ ಧ್ವನಿಯ ಜಾಡನ್ನ ಹುಡುಕಿ ಹೊರಟವ ಹಲವು ಬಾರಿ ಒಂಟಿಯಾದೆ, ನನ್ನ ಮಾತು ಯಾರಿಗೂ ಕೇಳಲಿಲ್ಲ. ಹಲವು ಬಾರಿ ಹೇಳಲೂ ಕೂಡ ಆಗಲೇ ಇಲ್ಲ. ಆಗಲೇ ಬಹುಶಃ ನಾನು ಸಾಹಿತ್ಯ ಹಾಗು ಬರವಣಿಗೆಯನ್ನ ರೂಡಿಸಿಕೊಂಡೆ ಅಂತ ಅನ್ನಿಸುತ್ತೆ. ಏಕಾಂಗಿಯಾಗಿದ್ದೂ ಒಂಟಿತನವನ್ನ ಮೀರಲಿಕ್ಕೆ ನನಗೆ ಸಾಹಿತ್ಯ, ಬರವಣಿಗೆ ಬೇಕಾಯಿತು, ಆದ್ದರಿಂದ ಬರೆದೆ. ಈಗಲೂ ಬರೆಯುತ್ತಿದ್ದೇನೆ. ಅನುಭವ ನಿರೂಪಣೆ ಹಾಗು ಸಂವಹನದಿಂದ ಪಡೆವ ಅರಿವು ಮನುಷ್ಯನನ್ನ ಮನುಷ್ಯನನ್ನಾಗಿಸುತ್ತೆ. ನನ್ನ ಎಲ್ಲಾ ಅಹಂಕಾರವನ್ನ, ನಾನೆಂಬೋ ದರ್ಪವನ್ನ ಹೋಗಲಾಡಿಸಿ ಮೃಗಕ್ಕಿಂತಲೂ ಹೀನನಾಗುವ ಮನುಷ್ಯನ ಮನಸ್ಥಿತೆಗೆ ನಾನು ತಲುಪುವುದನ್ನ ತಡೆಯುವುದು, ನನ್ನ ಅನುಭವದಿಂದ ನಾನು ಪಡೆಯೊ ಅರಿವು ಮಾತ್ರ.

ಜೀವ ಹಿಂಸೆ ಎಂಬೋ ಪದವಿದೆ. ಜೀವವನ್ನು ನೇರವಾಗಿ ಹಿಂಸಿಸುವ ಪ್ರವೃತ್ತಿ ಎಂದು ಅದರ ಅರ್ಥ. ಆದರೆ ಇಂದು "ದೊಡ್ಡವರೂ" ಎಂದು ಕರೆಯಲ್ಪಡುವವರ, "ಓದಿಕೊಂಡವರೂ" ಎಂದು ಕರೆಯಲ್ಪಡುವವರ ನಡವಳಿಕೆಯಿಂದ ನನಗನ್ನಿಸೋದು ಜೀವಹಿಂಸೆ ಎಂದರೆ ಬಾಹ್ಯ ದೇಹಕ್ಕೆ ಮಾಡೋ ಆಘಾತವೊಂದೇ ಅಲ್ಲ. ಕ್ಷುದ್ರ ಆಸೆ, ಅಧಿಕಾರದ ಮೋಹ, ತಾನೊಬ್ಬನೇ ಬದುಕಬೇಕು ಎಂಬೋ ಅತೀ ಆಸೆ, ಹೆಣದಮೇಲೂ ಹಣ ಹೆಕ್ಕೋ ಬುದ್ದಿ, ಈ "ಬಲ್ಲವರನ್ನ", "ದೊಡ್ಡವರನ್ನ", "ಓದಿಕೊಂಡವರನ್ನ" ಯಾವ ಮಟ್ಟಕ್ಕೆ ಇಳಿಸಿದೆ ಎಂದು ಕೆಲವು ತಿಂಗಳುಗಳಿಂದ ನನ್ನ ನೇರ ಅನುಭವಕ್ಕೆ ಬಂದಿತು. ಓದು ನಮಗೆ ಬದುಕನ್ನ ಅರ್ಥೈಸಿಕೊಳ್ಳುವ ವಿವಿಧ ಆಯಾಮಗಳನ್ನ ನೀಡಬೇಕು, ಆ ಓದಿನ ಮುಖಾಂತರವಾಗಿ ಅರಿವ ಬದುಕಿನ ಅರ್ಥವಂತಿಕೆಯಲ್ಲಿ ಜೀವನ ಪ್ರೀತಿಯನ್ನ ಮನುಷ್ಯ ಪಡೆಯಬೇಕು. ಆದರೆ ಆ "ಓದಿದ" ಮಂದಿಯ ಅತೀ ಕ್ಷುಲ್ಲಕ, ಮುಖ್ಯವಾಗಿ ಯಾವುದೇ ಮೌಲ್ಯಗಳಿಲ್ಲದೆ ಹಣಕ್ಕಾಗಿ ತಮ್ಮ ಹೆಣವನ್ನೂ ಮಾರಲು ಸಿದ್ದವಿರುವ ಜನರ ನೇರ ಸಂಪರ್ಕಕ್ಕೆ ಸಿಲುಕಿ ಅನುಭವಿಸಿದಾಗ ಮನುಷ್ಯ ಬದುಕಿನ ದುರಂತ, ಇಬ್ಬಂದಿತನ, ಕೇಡಿನ ಮೂಲ ಎಲ್ಲದರ ಸೂಕ್ಷ್ಮ ನೆಲೆಯು ಬದುಕಿನಷ್ಟೇ ಸಂಕೀರ್ಣವೂ ನಿಗೂಢವೂ ಆಗಿ ಕಂಡಿದೆ.  ಯಾಕೆ ಮನುಷ್ಯ ದ್ವೇಷಿಸುತ್ತಾನೆ? ಮನುಷ್ಯನಿಗ್ಯಾತಕ್ಕೆ ಜೀವನ ಪ್ರೀತಿಯೇ ಇಲ್ಲ? ಭಯವಾಗುತ್ತಿದೆ, ಮನುಷ್ಯರೆಲ್ಲಿದ್ದಾರೆ ಎಂದು ಕಂದೀಲು ಹಿಡಿದು ಹುಡುಕಬೇಕು ಎಂದು.

ಇರಲಿ, ಏಷ್ಟೇ ಕೇಡಿದ್ದರೂ ಒಳಿತು ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ಯಾಕೊ ನನ್ನ ಬದುಕಿನಲ್ಲಿ ನಡೆದ ಒಂದು ಘಟನೆ ನೆನಪಾಗುತ್ತಿದೆ. ಒಂದು ಹಂತದಲ್ಲಿ ನನ್ನ ಬದುಕಿನ ಅತ್ಯಂತ ಮುಖ್ಯ ಘಟ್ಟದಲ್ಲಿ ನನಗೆ ದಾರಿದೀಪವಾದ ಘಟನೆಯದು. ಇದು ಸಾಮಾನ್ಯ ಘಟನೆ, ಯಾವುದೇ ವಿಶೇಷಗಳು ಇರದೇ ಇರಬೊಹುದು, ಆದರೆ ಈ ಘಟನೆ ನನ್ನ ಬದುಕಿನ ಹಲವು ಪ್ರಶ್ನೆಗಳಿಗೆ ನೇರವಾಗಿ ಉತ್ತರ ಒದಗಿಸಿತ್ತು.

ನನ್ನ ನಿರ್ಧಾರಗಳ ಬಗೆಗೆ ಗೊಂದಲದಿಂದಿದ್ದ ಸಂದರ್ಭ. ನಾನು B Sc ಮಾಡುವಾಗ ಮುಂದೇನು ಅನ್ನೋ ಪ್ರಶ್ನೆಗೆ ಉತ್ತರ ಸಿದ್ದವಿತ್ತು, ಯಾಕೆಂದರೆ ಮುಂದೆ M Sc ಮಾಡಬೇಕು ಎಂಬೋದು. ಆದರೆ M Sc ನಂತರ ಏನು ಎಂಬೋ ಪ್ರಶ್ನೆ M Sc ಆದ ನಂತರ ಕಾಡಲಿಕ್ಕೆ ಆರಂಬಿವಾಯಿತು. ಈ ಸಂದರ್ಭದಲ್ಲಿ ನಾನು ಆರ್ಥಿಕವಾಗಿ ಸ್ವಾತಂತ್ರ್ಯನಾಗಬೇಕಿತ್ತು, ಆದ್ದರಿಂದ ನಾನು ಮಾಡುವ ಕೆಲಸದಲ್ಲೇ ನಾನು ಸಂತೃಪ್ತಿ ಹಾಗು ಅರ್ಥವನ್ನ ಕಾಣಬೇಕಿತ್ತು. ಅದೊಂದು ರೀತಿಯ ತೊಳಲಾಟದ ಪರಿಸ್ಥಿತಿ, ನನ್ನ ಬದುಕಿನ ಅಸ್ತಿತ್ವವನ್ನ ಹುಡುಕಿಕೊಳ್ಳಬೇಕು, ನನ್ನನ್ನ ನಾನು ಹುಡುಕಿ ಕೊಳ್ಳೋ ಕ್ರಿಯೆ, ಆದ್ದರಿಂದಲೇ ಮಹಾನ್ ಗೊಂದಲದಲ್ಲಿದ್ದೆ.

ಹಾಗೆ ಗೊಂದಲದಲ್ಲಿರಲು ಕಾರಣವೂ ಇತ್ತು, ನಾನು M Sc ಮಾಡಿದ ವಿದ್ಯಾ ಸಂಸ್ಥೆಯಲ್ಲಿ ತೀವ್ರ ಮಾನಸಿಕ ಗುಲಾಮಗಿರಿಗೆ ಒಳಗಾಗಿ ರೋಸಿ ಹೋಗಿದ್ದೆ. ನಮ್ಮ ಶಿಕ್ಷಣ ಪದ್ದತಿ ಮನುಷ್ಯನನ್ನ ಸ್ವತಂತ್ರ್ಯನನ್ನಾಗಿ ಮಾಡಬೇಕು, ಆದರೆ ನನ್ನ ಅನುಭವದಲ್ಲಿ ನನ್ನನ್ನು ನಾನು ಓದಿದ ಸಂಸ್ಥೆ ಯಾವ ರೀತಿಯಲ್ಲಿ ಬೌದ್ಧಿಕ ಗುಲಾಮನನ್ನಾಗಿ ಮಾಡುವುದು ಅನ್ನುವುದರಲ್ಲಿಯೆ ತಲ್ಲೀನವಾಗಿತ್ತು. ನಾನೋ ಮಾಹಾನ್ ಸ್ವಾತಂತ್ರ್ಯವನ್ನ ಬಯಸುವವ, ಆದರೆ ಆ ಸಂಸ್ಥೆಗೆ ಸಿಕ್ಕಿ ಹಾಕಿಕೊಂಡಿದ್ದೆ. ನನ್ನದೂ ತಪ್ಪಿದೆ, ನನಗೆ ಪದವಿ ಬೇಕಿತ್ತು. ಆದ್ದರಿಂದ ಎಷ್ಟೇ ಹಿಂಸೆಗೆ ತುತ್ತಾದರೂ ಬಾಯಿ ಮುಚ್ಚಿಕೊಂಡಿದ್ದೆ. ಕಂಡಿತವಾಗಿಯು ನನ್ನ ತಪ್ಪಿತ್ತು ಅದು ಪದವಿಗೆ ಆಸೆ ಪಡುವುದು. ಆದರೆ ಏನು ಮಾಡುವುದು ನಾನು ಆರ್ಥಿಕವಾಗಿ ಸ್ವಾತಂತ್ರ್ಯನಾಗಬೇಕಿದ್ದರೆ ನಾನು ಆ ಪದವಿಯನ್ನ ಪಡೆಯಲೇ ಬೇಕಿತ್ತು. ಆದ್ದರಿಂದ ಕಷ್ಟಪಟ್ಟು ಬದುಕಿದೆ, ಪ್ರತೀ ಕ್ಷಣವೂ ನನ್ನ ಸ್ವತಂತ್ರ್ಯವನ್ನ ಕೊಂದುಕೊಂಡು ಬದುಕಿಬಿಟ್ಟೆ. ಆ ಕ್ಷಣಗಳಲ್ಲಿ ತೀವ್ರ ಖಿನ್ನತೆಗೆ ಒಳಗಾಗುತ್ತಿದ್ದೆ. ಅದನ್ನ ಹೇಳಲೂ ಯಾರು ನನ್ನ ಜೊತೆಗೆ ಇಲ್ಲ, ನನ್ನ ಮಾತೂ ಯಾರಿಗೂ ಅರ್ಥವಾಗುವುದಿಲ್ಲ. ನೋಡಿ ನಗುತ್ತಿದ್ದರು, ಕಾರಣ ಅವರೆಲ್ಲರೂ ಗುಲಾಮಗಿರಿಗೆ ಒಗ್ಗಿಹೋಗಿದ್ದರು. ಅವರು ಸದಾ ಗುಲಾಮರೇ ಆಗಿ ಹೋಗಿದ್ದರಿಂದ ಸ್ವಾತಂತ್ರ್ಯದ ಅನುಭವ ಅವರಿಗೆ ಬೇಕಿರಲಿಲ್ಲ. ನನಗೋ ಸ್ವತಂತ್ರ್ಯ ಬೇಕು,  ಆದರೆ ಆ ಸಂಸ್ಥೆ ನನ್ನನ್ನು ತೀವ್ರ ಗುಲಾಮಗಿರಿಗೆ ಒಳಪಡಿಸಿತ್ತು. ರೋಸಿಹೋಗಿದ್ದೆ. ಹೀಗೆ ಸ್ವಾತಂತ್ರ್ಯ ಹಾಗು ಗುಲಾಮಗಿರಿಗಳ ನಡುವೆ ತೊಳಲಾಡುತ್ತಿದ್ದೆ. ಯಾವಾಗ ನನ್ನ M Sc ಮುಗಿಯಿತೋ ತಕ್ಷಣ ಆ ಸಂಸ್ಥೆಯನ್ನ ಬಿಟ್ಟು ಬಂದೆ.

ಬದುಕಿನ ಅರ್ಥದ ಸಂಶೋದನೆಯನ್ನ ಬೌತಶಾಸ್ತ್ರದ ಸಂಶೋದನೆಯ ಜೊತೆಗೆ ಕ್ರೋಡೀಕರಿಸಿದೆ. ಬೌತಶಾಸ್ತ್ರ ನನ್ನ ಬದುಕಿನ ಮಾರ್ಗವಾಯಿತು. ಭಾರತದ ಪ್ರಖ್ಯಾತ ಸಂಶೋದನಾ ಸಂಸ್ಥೆಯಲ್ಲಿ ಸಂಶೋದನಾ ವಿದ್ಯಾರ್ಥಿಯಾಗಿ ಸೇರಿಕೊಂಡೆ. ಮಹತ್ವಾಕಾಂಕ್ಷೆಯಿತ್ತು ಸಾದಿಸಬೇಕೆಂಬೋ ಮನಸಿತ್ತು. ಹುಚ್ಚಿಗೆ ಬಿದ್ದವನಂತೆ ಓದಲು ತೊಡಗಿದೆ, ಬೆಳಗ್ಗೆ ೮ ಗಂಟೆಯಿಂದ ರಾತ್ರಿ ೧೨ರ ವರೆಗೆ ಓದುತ್ತಿದ್ದೆ. ಎಲ್ಲರಿಂದ ಬೇರ್ಪಟ್ಟ., ಸಾದಿಸುವುದರಲ್ಲಿ ಅರಿಯಬೊಹುದು ಎಂಬೋ ಆಶಯ. ವಿಜ್ಞಾನದಲ್ಲಿನ ಸಂಶೋದನೆಯಿಂದ ಪ್ರಕೃತಿಯ ಬಗೆಗಿನ ಸತ್ಯವನ್ನ ಅರಿಯುತ್ತೀನಿ ಎಂಬೋ ನಂಬಿಕೆ ಇತ್ತು. ಸ್ವಲ್ಪ ದಿನ ಕಳೆದಂತೆ ನಾನು ಅಲ್ಲಿಯೂ ಗುಲಾಮನಾಗುತ್ತಿದ್ದೀನಿ ಎಂಬುದು ಅರಿವಾಗುತ್ತಾ ಹೋಯಿತು. ಸಂಶೋದನೆ ಎಂದರೆ ನನ್ನ ಮನಸ್ಸಲ್ಲಿ ಹುಟ್ಟಿದ ಪ್ರಶ್ನೆಗೆ ಉತ್ತರವನ್ನ ಕಂಡುಕೊಳ್ಳುವುದೇ ವಿನಃ ಯಾರೋ ಕೊಟ್ಟ ಪ್ರಶ್ನೆಗೆ ಉತ್ತರವನ್ನ ಕಂಡುಕೊಳ್ಳುವುದಲ್ಲ ಅಂತ ಅನ್ನಿಸಿತು. ಅದು ಸತ್ಯವೂ ಆಗಿತ್ತು. ನನ್ನ ಪ್ರಕಾರ, ನಾನು ಪ್ರಕೃತಿಯನ್ನ ಕಾಣುತ್ತೇನೆ ಹಾಗೆ ಕಂಡಾಗ ಅದು ನನಗೆ ಏನೋ ಪ್ರಶ್ನೆಯನ್ನ ನೀಡುತ್ತದೆ ಅದಕ್ಕೆ ಉತ್ತರವನ್ನ ಕಂಡುಕೊಳ್ಳಬೇಕಿತ್ತು, ಆದರೆ ಆ ಸಂಶೋದನಾ ಸಂಸ್ಥೆಯಲ್ಲಿ ನನ್ನ ಗೈಡ್ ನ ಯಾವುದೋ ಪ್ರಾಜೆಕ್ಟಿಗೆ ನಾನು ದುಡಿಯುತ್ತಿದ್ದೆ, ಅಂದರೆ ಅಲ್ಲಿ ನಿಜವಾಗಿಯೂ ನಾನು ಯಾವುದೇ ಸಂಶೋದನೆ ಮಾಡುತ್ತಿಲ್ಲ ಅಂತ ಅನ್ನಿಸಿತು. ಬದುಕು ಇಲ್ಲಿ ನನ್ನ ಅರ್ಥಕ್ಕೆ ದಕ್ಕುವುದಿಲ್ಲ ಅಂತ ಅನ್ನಿಸಲು ಆರಂಬಿಸಿತು.ವಿಜ್ಞಾನ ಎಂಬೋದು ಅನುಭವವನ್ನ ಮೀರಿದ ಸತ್ಯವನ್ನ ಹುಡುಕೋದು ಎಂಬುದು ಕೇವಲ ಮಾತಾಗಿ ಉಳಿದಿತ್ತು. ಆ ಸಂಶೋದನಾ ಸಂಸ್ಥೆಯಲ್ಲಿ, ಸಂಶೋದನೆ ಎಂದರೆ ಒಂದು ವ್ಯಾಪಾರವಾಗಿತ್ತು. ನಾವು ಎಷ್ಟು ಸಂಶೋದನಾ ಪ್ರಬಂದವನ್ನ ಪ್ರಕಟಿಸಿದ್ದೇವೆ ಎಂಬುದು ಮಾತ್ರ ಮುಖ್ಯವಾಗಿ ಹೋಗಿತ್ತು. ಅದು ಬೇರೆಯವರಿಗೆ ಸರಿಯಿರಬೊಹುದೋ ಏನೋ, ಆದರೆ ಅದೇ ನನಗೆ ಒಂದು ರೀತಿಯ ಹಿಂಸೇಯೂ ಆಗ ತೊಡಗಿತು. ಹಲವು ತಾತ್ವಿಕ ಅರ್ಥಕ್ಕೂ ಅದು ಹೊಂದಿಕೆಯಾಗುತ್ತಿರಲಿಲ್ಲ. ಒಮ್ಮೆ ಸೋಮವಾರ ಬೆಳಗ್ಗೆ ೮ ಗಂಟೆಗೆ ಆ ಸಂಸ್ಥೆಗೆ ಹೋದವ ಶನಿವಾರ ಮದ್ಯಾಹ್ನ ೨ ಗಂಟೆಗೆ ಹೊರಗೆ ಬಂದಿದ್ದೆ. ಅಷ್ಟೂ ದಿನ ಒಂದು ವಾರಗಳ ಕಾಲ ಯಾರೊಂದಿಗೂ ಮಾತೂ ಇರಲಿಲ್ಲ. ಹೊರಗೆ ಬಂದಾಗ ಇಡೀ ಪ್ರಪಂಚ ನನಗೆ ವಿಚಿತ್ರವಾಗಿ ಕಾಣಲು ಆರಂಭವಾಯಿತು. ಅಂದರೆ ಪ್ರಪಂಚದಲ್ಲಿ ನಾನು ಪ್ರತ್ಯೇಕಕೊಂಡಿದ್ದೆ. ಎಷ್ಟೆಂದರೆ ನನ್ನನ್ನೇ ನಾನು ಗುರುತಿಸಿಕೊಳ್ಳಲಾರದಷ್ಟು. ಆಗ ಅನ್ನಿಸಿತು ಎಲ್ಲೋ ನಾನು ತಪ್ಪುತ್ತಿದ್ದೇನೆ ಎಂದು. ಅಂದರೆ ನಾನು ಕಾಣುವ ಈ ಮಾರ್ಗದಲ್ಲಿ ಬದುಕಿನ ಅರ್ಥವನ್ನ ನಾನು ಕಾಣಲಾರೆ ಎಂದು, ಅತಿ ಮುಖ್ಯವಾಗಿ ತೀರ ಸಂಕುಚಿತವಾಗಿ ನಾನು ಮತ್ತೊಮ್ಮೆ ಅಲ್ಲಿ ಬಂದಿಯಾಗಿ ಗುಲಾಮನಾಗಿದ್ದೆ.  ಯಾವ ಭಯವೂ ಇಲ್ಲದೆ ಲೋಕವನ್ನ ಕಾಣುವುದೂ, ಕಂಡದ್ದನ್ನ ಮತ್ತೇ ಯಾವ ಭಯವೂ ಇಲ್ಲದೆ  ವ್ಯಕ್ತಪಡಿಸುವುದು ಇದನ್ನೇ ಸ್ವಾತಂತ್ರ್ಯ ಎಂದು ಕರೆಯುತ್ತಾರೆ. ಈ ಸ್ವಾತಂತ್ರ್ಯವೇ ನನಗೆ ನನ್ನ ಬದುಕಿನ ಧ್ವನಿಯನ್ನ ಕೇಳಿಸುವುದು. ಅರಿಯುವುದಕ್ಕೇ ಸ್ವಾತಂತ್ರ್ಯವಿಲ್ಲ ಎಂದಾದರೆ ಕಾಣೂವುದೇನನ್ನ. ಒಟ್ಟಿನಲ್ಲಿ ಸಂಶೋದನೆಯನ್ನೆ ಬಿಟ್ಟುಬಿಡಬೇಕೆಂದುಕೊಂಡೆ. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ, ನಾನು ಆ ಸಂಶೊದನಾ ಸಂಸ್ಥೆಯನ್ನ ತೊರೆದರೆ ನಾನು PhD ಮಾಡಲಿಕ್ಕೆ ಸಾದ್ಯವಿಲ್ಲ. ಈಗಲಂತೂ ಆ PhD ಮಾಡುವುದೇ ಬೇಡೆ ಎಂದಾಗಿತ್ತು. PhD ಇಲ್ಲದೆ ಹೋದರೆ ನನಗೆ ಒಳ್ಳೆಯ ಉದ್ಯೋಗ ಸಿಗುವುದಿಲ್ಲ. ನಾನು ನೆಲೆ ನಿಲ್ಲುವುದಕ್ಕೆ ಆಗುವುದಿಲ್ಲ. ಆದರೆ ನಾನು ಈ ಸಂಶೋದನೆ ಎಂಬೋ ವ್ಯಾಪರದಲ್ಲೂ ಮುಂದುವರೆಯಲು ಸಿದ್ಧನಿರಲಿಲ್ಲ. ನನಗೆ ಹಲವು ತಾತ್ವಿಕ ಸಮಸ್ಯೆಗಳೂ ಎದುರಾದವು. ಅತಿ ಮುಖ್ಯವಾಗಿ ಪ್ರಕೃತಿಯನ್ನ ಅರಿಯುವುದೂ, ಸತ್ಯವನ್ನ ಕಾಣಿವುದು ಉದ್ದೇಶರಹಿತವಾಗಿರಬೇಕು ಎಂಬುದು. ಅಂದರೆ ಈಗ ನಾನು ಪ್ರಕೃತಿಯನ್ನ, ಆಕೆಯನ್ನ ಅರಿಯಬೇಕು ಅನ್ನೋ ಉದ್ದೇಶವೇ ಅಕೆಯನ್ನ ಅರಿಯಲು ಸಾದ್ಯವಾಗುವುದಿಲ್ಲ ಎಂಬೋ ಪ್ರಜ್ಞೆ, ಅಂತಹುದರಲ್ಲಿ ಪದವಿಗಾಗಿ, PhD ಗಾಗಿಯೆಲ್ಲಾ ನಾನು ಸಂಶೋದನೆ ಮಾಡಿದರೆ ಸತ್ಯ ಕಾಣುವುದಿಲ್ಲ ಎಂಬುದು. ಆಕೆಯ ಮುಂದೆ ಸುಮ್ಮನೆ ಕಾಲಿ ಕೈಗಳಲ್ಲಿ ನಾನು ನಿಲ್ಲಬೇಕು, ಆಗ ಆಕೆ ಆಕೆಯ ಎಲ್ಲಾ ರಹಸ್ಯಗಳನ್ನೂ ಬಿಚ್ಚಿಡುತ್ತಾಳೆ. ನಾನು ಅರಿಯಬೇಕು ಅಂತ ಹೋದಾಗ ಆಕೆ ಏನನ್ನು ತಿಳಿಸುವುದಿಲ್ಲ. ಅದರಲ್ಲೂ ನಾನು ಪ್ರಕೃತಿಯ ಒಂದು ಅಂಗ, ನನ್ನಲ್ಲಿ ಪದವಿಗಾಗಿಯೋ, ಹಣಕ್ಕಾಗಿಯೋ, ಆಕೆಯನ್ನ ಅರಿಯಲು ಹೋದರೆ ಸ್ವಲ್ಪವೂ ಅರಿಯಲಾಗುವುದಿಲ್ಲ. ಒಂದು ಕಥೆ ನೆನಪಾಗುತ್ತದೆ. ನಾನು ಚಿಕ್ಕವನಾಗಿದ್ದಾಗ ನನಗೆ ಯಾರೋ ಹೇಳಿದ್ದದ್ದು. ಒಂದು ಕಾಡು, ಆ ಕಾಡಿನಲ್ಲಿ ಒಬ್ಬ ಹುಡುಗ ಇರುತ್ತಾನೆ. ಆ ಹುಡುಗನಿಗೆ ಎಲ್ಲಾ ಪ್ರಾಣಿ, ಪಕ್ಷಿಗಳ ಭಾಷೆ ಅರ್ಥವಾಗುತ್ತಿರುತ್ತದೆ. ಅವನು ಮರ ಗಿಡಗಳೊಂದಿಗೆ ಮಾತನಾಡುತ್ತಿರುತ್ತಾನೆ. ಅವನ ಪ್ರತಿಯೊಂದು ಪ್ರಶ್ನೆಗಳಿಗೆ ಪ್ರಕೃತಿ ಉತ್ತರಿಸುತ್ತಿರುತ್ತದೆ. ಒಮ್ಮೆ ಅವನಗೆ ನಗರದ ಒಬ್ಬ ವ್ಯಕ್ತಿ ಪರಿಚಿತನಾಗುತ್ತಾನೆ. ಆ ಕಾಡ ಹುಡುಗನನ್ನು ಕರೆದು, ಹೇಗೆ ತಾನು ನಾಗರೀಕನಾಗಬೇಕು ಎಂದು ತಿಳಿಸಿ, ನಿನ್ನ ಕಾಡಿನಲ್ಲಿ ಚಿನ್ನದ ಮೊಟ್ಟೆ ಇಡೋ ಹಕ್ಕಿ ಇದೆ, ಆ ಹಕ್ಕಿ ನಿನ್ನ ಮಾತು ಕೇಳುತ್ತೆ, ಒಂದು ಮೊಟ್ಟೆ ತೆಗೆದುಕೊಂಡು ಬಾ, ನಿನಗೆ ಬೇಕಿದ್ದದ್ದು ಕೊಡುತ್ತೇನೆ ಎಂದು ಹೇಳುತ್ತಾನೆ. ಅದರಂತೆ ಈ ಕಾಡ ಹುಡುಗ ಆ ಹಕ್ಕಿಯನ್ನ ಕರೆಯುತ್ತಾನೆ, ಯಾವ ಹಕ್ಕಿಯೂ ಬರುವುದಿಲ್ಲ. ಅವನ ಮಾತಿಗೆ ಯಾವುದೂ ಪ್ರತಿಕ್ರಿಯಿಸುವುದಿಲ್ಲ. ಹೀಗೆ ನಮ್ಮದೊಂದು ಉದ್ದೇಶವನ್ನ ಇಟ್ಟುಕೊಂಡು ಆಕೆಯನ್ನ ಅರಿಯುತ್ತೀನಿ ಎಂದು ಹೋದರೆ ಆಕೆ ಒಲಿಯುವುದಿಲ್ಲ ಎಂಬೋದು ನನಗೆ ಗೊತ್ತಾಯಿತು.ಆದ್ದರಿಂದ ಸಂಶೋದನಾ ಸಂಸ್ಥೆಯನ್ನ ಬಿಡೋಣ ಎಂದು ಒಂದು ಕಡೆ, ಆದರೆ ಬಿಟ್ಟರೆ ಮುಂದೇ ಏನು ಎಂಬೋದು ಮತ್ತೊಂದು ಕಡೆ ಹೀಗೆ ತೊಳಲಾಟಕ್ಕೆ ಬಿದ್ದೆ. ಸುಮ್ಮನೆ ಕಾಲಿ ಕೈಗಳಲ್ಲಿ ನಿಲ್ಲುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ.

ನಮ್ಮ ಸಾಕ್ಷಿಪ್ರಜ್ಞೆಯ ಧ್ವನಿಯಂತೆ ನಡೆಯುವುದು ಅಷ್ಟು ಸುಲಭವಲ್ಲ, ಅದೂ ಹೀಗೆ ಸುಮ್ಮನೆ ಕಾಲಿ ಕೈಗಳಲ್ಲಿ ನಿಲ್ಲುವುದಂತು ಸಾದನೆಯೇ ಸರಿ. ನಿಜ ನಮ್ಮ ಇಚ್ಚೆಯಂತೆ ಬದುಕುವುದು ಬದುಕಿನ ಮಹಾನ್ ಸಾದನೆ. ಹೊರಗಿನ ಎಲ್ಲಾ ಆಸಕ್ತಿಗಳು, ಆಕಾಂಕ್ಷೆಗಳು ನನ್ನನ್ನು ನನ್ನ ಒಳಧ್ವನಿಯನ್ನ ಕೇಳಲಿಕ್ಕೆ ಬಿಡುತ್ತಿರಲಿಲ್ಲ. ಅಧಿಕಾರ, ಪದವಿ ,ಸಮಾಜದಲ್ಲಿ ಸ್ಥಾನಬಲದಿಂದ ಪಡೆಯಬೊಹುದಾದ ಗೌರವ ಎಲ್ಲಾ ಒಂದು ದಿಕ್ಕಿನಲ್ಲಿ ನನ್ನನ್ನ ಆಕರ್ಷಿಸುತ್ತಿತ್ತು, ಮತ್ತೊಂದು ಕಡೆ ಮನಸ್ಸಿಗೆ ನೆಚ್ಚಿದಂತೆ ಬದುಕುವುದು, ಸತ್ಯವನ್ನ ಕಾಣುವುದು, ಸುಂದರವಾಗಿ ಬದುಕುವುದು ನನ್ನನ್ನು ಆಕರ್ಷಿಸುತ್ತಿತ್ತು.  ಅಲ್ಲಿ ನಾನು ದ್ವಂದ್ವಕ್ಕೆ ಬಿದ್ದಿದ್ದೆ. ಹಾಗು ತೀವ್ರ ಒತ್ತಡದಲ್ಲಿದ್ದೆ. ಈ ಒಂದು ನಿರ್ಧಾರದಿಂದ ನನ್ನ ಬದುಕೇ ಪರಿವರ್ತನೆಗೆ ಸಿಲುಕುತ್ತದೆಂಬ ಅರಿವು ನನ್ನಲ್ಲಿತ್ತು. ನನ್ನ ಮುಂದಿನ ಇಡೀ ಜೀವನ ಈ ನಿರ್ಧಾರದ ಮೇಲೆ ಬಹುವಾಗಿ ಕೇಂದ್ರೀಕೃತವಾಗಿತ್ತು. ನಿರ್ಧಾರ ಅಷ್ಟು ಸುಲಭವಾಗಿರಲಿಲ್ಲ. ಎಷ್ಟು ಒತ್ತಡಕ್ಕೆ ಸಿಲುಕಿದ್ದೆ ಎಂದರೆ ಒಮ್ಮೆ ಬೆಂಗಳೂರಿನ ರಸ್ತೆಯ ಮದ್ಯದಲ್ಲಿ ತಲೆತಿರುಗಿ ಕೂತುಬಿಟ್ಟೆ.

ಯಾರು ಈ ನನ್ನ ಸಮಸ್ಯೆಯನ್ನ ಪರಿಹರಿಸುವವರು? ನನಗೊಂದು ನಂಬಿಕೆ ಇತ್ತು, ಅದು ನನ್ನ ಅನುಭವದಿಂದ ಬಂದದ್ದು,ನಾವು ಶುದ್ದ ಮನಸ್ಸಿನಿಂದ ಏನನ್ನಾದರೂ ಸಂಕಲ್ಪಿಸಿದರೆ ಆ ಪ್ರಕೃತಿಯೇ ದಾರಿ ತೋರತ್ತೆ ಎಂಬುದು. ನಾವು ಸಂಕಲ್ಪಿಸಬೇಕು ಅಷ್ಟೆ. ಆಗ ನಾನು ರಾಮಕೃಷ್ಣ ಮಠಕ್ಕೆ ಹೋಗಿ ಸಲಹೆಯನ್ನ ಪಡೆಯೋಣ ಎಂದುಕೊಂಡೆ. ಮೊದಲಿನಿಂದಲೂ ರಾಮಕೃಷ್ಣ, ವಿವೇಕಾನಂದರು ನನ್ನನ್ನ ಪ್ರಬಾವಿಸಿದ್ದರು. ಆದ್ದರಿಂದ ಮಠದ ಸ್ವಾಮೀಜಿಯವರನ್ನ ಸಂಪರ್ಕಿಸಿ ಅವರಲ್ಲಿ ನನ್ನ ದ್ವಂದ್ವವನ್ನ ಇಟ್ಟರೆ ಪರಿಹಾರ ದೊರಕಬೊಹುದು ಎಂಬ ನಂಬಿಕೆಯಿಂದ ರಾಮಕೃಷ್ಣ ಮಠಕ್ಕೆ ಹೊರಟೆ.  ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ರಾಮಕೃಷ್ಣ ಮಠಕ್ಕೆ ಬೇಟಿಯಿತ್ತೆ.

ಧ್ಯಾನ ಮಂದಿರ ನಿಶ್ಯಬ್ದವಾಗಿತ್ತು. ಕೂತೆ. ನಿರಂತರವಾಗಿ ಹರಿವ ಜೀವದ್ರವ್ಯವೊಂದರ ಸಮೀಪ ಸಾಂಗತ್ಯಕ್ಕೆ ಒಳಪಟ್ಟೆ. ಜಗತ್ತಿಗೆ ಮಾನವ ಪ್ರೇಮವನ್ನೂ, ಜೀವನ ಪ್ರೀತಿಯನ್ನೂ ನೀಡಿದ ಮಹೋನ್ನತ ವ್ಯಕ್ತಿ ರಾಮಕೃಷ್ಣರು. ಗುರುವೇ ತಲೆಬಾಗಿ ನಿಂತಿದ್ದೀನಿ ನಿನ್ನ ಬಳಿ. ಜಗತ್ತನ್ನ ಪ್ರೀತಿಸಬೇಕು, ಆ ಪ್ರೀತಿಸುವ ಮನಸ್ಸು ತಪ್ಪ ಮತ್ತೇನು ಬೇಡ. ಹಾಗೆ ಪ್ರೀತಿಸುವ ಮನಸ್ಸನ್ನ ನೀಡೋ, ಕೇಳಿಕೊಂಡೆ. ಮನುಷ್ಯ ಮನುಷ್ಯನಾಗೋದು ಅಷ್ಟು ಸುಲಭವಾಗಿರಲಿಲ್ಲ. ಬಾಹ್ಯ ಆಕಾಂಕ್ಷೆಗಳು, ಅಪೇಕ್ಷೆಗಳು ಮನುಷ್ಯನನ್ನ ಮೃಗವನ್ನಾಗಿಸುತ್ತೆ. ನಾನು ಮನುಷ್ಯನಾಗೇ ಇರಬೇಕಿತ್ತು. ಆಶ್ರಮದಲ್ಲಿ ಸ್ವಾಮೀಜಿಗಳನ್ನ ಕಾಣಲಿಕ್ಕೆ ಕಚೇರಿಯಲ್ಲಿ ಅನುಮತಿಯನ್ನ ಪಡೆಯಬೇಕಿತ್ತು. ಕಚೇರಿಯಲ್ಲಿ ಅನುಮತಿಯನ್ನ ನೀಡಬೇಕಿದ್ದ ಮತ್ತೊಬ್ಬ ಸ್ವಾಮೀಜಿಯವರು ಎಲ್ಲಿಗೋ ತೆರೆಳಿದ್ದ ಕಾರಣ ನಾನು ಅವರಿಗಾಗಿ ಕಾಯುತ್ತಾ ಕೂತೆ. ಆಗ ಒಂದು ಘಟನೆ ನಡೆಯಿತು.

ಆಗ ಅಲ್ಲಿ ಒಬ್ಬ ವ್ಯಕ್ತಿ ಕಂಡರು. ಕಚ್ಚೆ ಪಂಚೆ ಉಟ್ಟುಕೊಂಡು, ಮೇಲೆ ಕೆಂಪು ಶಾಲನ್ನ ಹೊದ್ದುಕೊಂಡು ಹಣೆಯಲ್ಲಿ ನಾಮವನ್ನ ದರಿಸಿ ಸಾಂಪ್ರದಾಯಿಕ ಉಡುಪಿನಲ್ಲಿದ್ದರು.ನನ್ನ ಪಕ್ಕಕ್ಕೆ ಬಂದಾಗ ಗೌರವಿಸಿ ಎದ್ದು ನಿಂತೆ. ನನ್ನ ಪಕ್ಕದಲ್ಲೆ ಕುಳಿತಿದ್ದರು. ಆಗ ಅವರಿಗೆ ಒಂದು ದೂರವಾಣಿ ಕರೆ ಬಂದಿತು. ಆ ಕರೆಯಿಂದ, ಇಷ್ಟು ಹೊತ್ತು ಶಾಂತವಾಗಿ ಕಂಡಂತಹ ವ್ಯಕ್ತಿ ಸ್ವಲ್ಪ ಉದ್ವಿಘ್ನರಾದಂತೆ ಕಂಡರು. ದೂರವಾಣಿಯಲ್ಲಿ ಜೋರಾಗಿ ಕೋಪಗೊಂಡು ಮಾತಾಡುತ್ತಿದ್ದರು. ಜೋರಾಗಿ ಮಾತಾಡುತ್ತಿದ್ದುದರಿಂದ ಅವರ ಮಾತುಗಳು ನನಗೂ ಕೇಳುತ್ತಿತ್ತಾದ್ದರಿಂದ ಅವರ ಮಾತುಗಳಿಂದ ನಾನಿಷ್ಟನ್ನ ಗ್ರಹಿಸಿದೆ. ಆ ವ್ಯಕ್ತಿ ದೊಡ್ಡ ಸಂಸ್ಕೃತ ಪಂಡಿತರೂ, ರಾಷ್ಟ್ರಪತಿಗಳಿಂದ ಬಂಗಾರದ ಪದಕವನ್ನ ಪಡೆದವರೂ ಆಗಿದ್ದರು. ಯಾವುದೋ ವ್ಯಾವಹಾರಿಕ ಸಮಸ್ಯೆಯೋ ಏನೋ ಅವರ ಮಗ ತಂದೆಯ ವಿರುದ್ದವಾಗಿದ್ದ. ಸಂಸ್ಕೃತ ಪಂಡಿತರ ಮಗ ತನ್ನ ತಂದೆಯನ್ನ ಆಸ್ತಿಗಾಗಿ ಬೆದರಿಸುತ್ತಿದ್ದ. ಕಡೆಗೆ ಆ ಮಗ ತಂದೆಯನ್ನ ಕೊಲ್ಲುತ್ತೀನೆಂದು ಬೆದರಿಸಿದ್ದ. ಈ ಸಂಸ್ಕೃತ ಪಂಡಿತರು ಆಸ್ತಿಯನ್ನ ನೀಡಲಾರದೆ, ಮಗನ ಬಾಧೆಯನ್ನ ತಾಳಲಾರದೆ ಅವನ ವಿರುದ್ದ ಪೋಲೀಸಿನವರಿಗೆ ದೂರು ನೀಡಿದ್ದರು. ಈಗ ಪೋಲೀಸರೆ  ಕರೆ ಮಾಡಿದ್ದರು. ಅವರ ಮಾತುಗಳನ್ನ ಸಂಗ್ರಹ ರೂಪದಲ್ಲಿ ಈ ರೀತಿ ನೀಡುತ್ತೇನೆ.
"ಸ್ವಾಮೀ ಏನು ಪ್ರಾರಬ್ದವೋ ಏನೋ ನೋಡಿ. ನಾನು ನನ್ನ ಮಗನ ವಿರುದ್ದವೇ ದೂರು ನೀಡಬೇಕಾಗಿ ಬಂದಿದೆ. ನಾನು ಬಹು ದೊಡ್ಡ ಸಂಸ್ಕೃತ ಪಂಡಿತ, ರಾಷ್ಟ್ರಪತಿಗಳಿಂದ ಬಂಗಾರದ ಪದಕ ಪಡೆದವನು, ಹತ್ತು ವರ್ಷಗಳಿಂದ ಭಾಗವತವನ್ನ ಪ್ರವಚನ ಮಾಡುತ್ತಿದ್ದೇನೆ. ಆದರೆ ಏನು ಮಾಡೋದು, ನನ್ನ ಮಗ ಇವತ್ತು ನನ್ನ ಇರುವ ಒಂದೇ ಒಂದು ಸ್ವಂತ ಮನೆಯನ್ನ ಕೊಡು ಅಂತ ಕೇಳ್ತಾ ಇದ್ದಾನೆ. ಕೊಡದೇ ಹೋದರೆ ಕೊಲ್ಲುತ್ತೀನಿ ಅಂತ ಬೆದರಿಸುತ್ತಿದ್ದಾನೆ. ಮೂವತ್ತು ವರ್ಷ ಸ್ವಾಮಿ ಅವನಿಗೆ. ಏನೂ ಕೆಲಸ ಮಾಡೋಲ್ಲ. ನಾನೇ ನನ್ನ ಪಿಂಚಣಿ ಹಣ ನೀಡ್ತಾ ಇದ್ದೀನಿ. ಈಗ ನೋಡಿದ್ರೆ ಮದುವೆ ಮಾಡು ಅಂತ ಹೇಳ್ತಾನೆ, ಏನು ಸ್ವಾಮಿ ಮಾಡೋದು. ಇರೋ ಒಂದು ಮನೆಯನ್ನ ಅವನಿಗೆ ಕೊಟ್ಟು ಬಿಟ್ಟರೆ ಮುಂದೆ ನಾನೇನು ಮಾಡಲಿ. ಕೊಲ್ಲುತ್ತೀನಿ ಅಂತ ಬೆದರಿಸುತ್ತಿದ್ದಾನೆ, ಅದಕ್ಕೆ ದೂರು ನೀಡಿದೆ. ದೂರು ನೊಂದಾಯಿಸಬೇಡಿ. ಸ್ವಲ್ಪ ಹೆದರಿಸಿ ಸಾಕು. ದಯವಿಟ್ಟು ಈ ಒಂದು ಸಹಾಯ ಮಾಡಿ. ನಾನು ಸಂಸ್ಕೃತ ಪಂಡಿತ, ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದವ. ಹತ್ತು ವರ್ಷಗಳಿಂದ ಭಾಗವತವನ್ನ ಪ್ರವಚನ ಮಾಡುತ್ತಿದ್ದೇನೆ." ಅಂತ ಕೋಪದಲ್ಲಿದ್ದರು. ನನಗೆ ಏನೂ ತಿಳಿಯಲಿಲ್ಲ. ಯಾಕೆ ಈ ಮನುಷ್ಯ ಅಷ್ಟು ಕ್ಷೋಭೆಯಲ್ಲಿದ್ದಾನೆ ಎಂಬುದು. ಭಾಗವತ, ವ್ಯಾಸರ ಕಥೆಯದು, ಶುಕನ ಕಥೆಯದು, ಸಾವು ಬದುಕಿನ ಕಥೆಯದು. ಒಬ್ಬ ಸಾವನ್ನ ಮೀರಿದಾತ ಸಾವಿನ ಸನಿಹಕ್ಕೆ ಕೂತವನಿಗೆ ಹೇಳುವ ಕಥೆಯದು ಭಾಗವತ. ಕೃಷ್ಣನ ಕಥೆಯಾಗಿ, ಗೋಪಿಯರ ಕಥೆಯಾಗಿ, ಜೀವ ಬದುಕು ಸಾವಿನ ರೂಪಕವಾಗಿ ಹರಿದದ್ದು ಭಾಗವತ. ಆ ಭಾಗವತದಿಂದ ಇವರು ಏನನ್ನೂ ಪಡೆಯಲಿಲ್ಲವೆ? ನಾನು ಆ ಘಟನೆಯನ್ನಾಗಲೀ, ಆ ವ್ಯಕ್ತಿಯನ್ನಾಗಲೀ ವಿಶ್ಲೇಷಿಸುತ್ತಿಲ್ಲ. ಅವಲೋಕಿಸುತ್ತಲೂ ಇಲ್ಲ. ಕೇವಲ ಅಲ್ಲಿ ಕಂಡದ್ದನ್ನು ಮಾತ್ರ ಹೇಳುತ್ತಿದ್ದೇನೆ. ಹಾಗು ಈ ಘಟನೆ ನನಗೇಕೆ ಅಷ್ಟು ಪ್ರಮುಖವಾಯಿತು ಎಂದರೆ ಅದೂ ನಾನು ಹೇಳಲಾರೆ. ಕೆಲವು ಘಟನೆಗಳು ಬದುಕನ್ನು ನೋಡುವ ಹಾಗು ಸ್ವೀಕರಿಸುವ ಬಗೆಯನ್ನ ಬದಲಾಯಿಸುತ್ತವೆ.

ಅಂದು ಸ್ವಾಮೀಜಿಯವರು ಬೇರಾವುದೋ ಕೆಲಸದಿಂದ ಹೊರ ಹೋಗಿರುವುದಾಗಿ ತಿಳಿದು ಬಂದಿತು. ಆದ್ದರಿಂದ ಮತ್ತೊಂದು ದಿನ ಬರುವುದೆಂದೂ ರೂಮಿಗೆ ಹಿಂದಿರುಗುವುದೆಂದೂ ತೀರ್ಮಾನಿಸಿದೆ.

ಹೊರಗೆ ಬರುವಾಗ ಗೇಟಿನ ಬಳಿ ಒಬ್ಬ ವ್ಯಕ್ತಿ, ಕಣ್ಣು ಕಾಣದ ಕುರುಡನೊಬ್ಬ ನಿಂತಿದ್ದ. ಆತ ಬಟ್ಟೆಯ ಚೀಲಗಳನ್ನು ಮಾರುತ್ತಿದ್ದ. ನನಗೆ ಆಕರ್ಷಕವೆನಿಸಿತು. ಹತ್ತಿರ ಹೋದೆ. ಆ ರೀತಿಯ ಚೀಲವನ್ನ ನಾನು ಉಪಯೋಗಿಸುತ್ತೇನೆ. ಆದ್ದರಿಂದ ಕೊಳ್ಳುವುದೆಂದು ತೀರ್ಮಾನಿಸಿದೆ.
"ಎಷ್ಟು ರೂಪಾಯಿಗಳು, ಒಂದು ಚೀಲಕ್ಕೆ?"
"ಜಿಪ್ ಇರೋದಕ್ಕೆ ಅರವತ್ತು ರೂಪಾಯಿ, ಜಿಪ್ ಇಲ್ಲದ್ದಕ್ಕೆ ಐವತ್ತು ರೂಪಾಯಿ"
"ಕಡಿಮೇ ಇಲ್ಲವ?"
"ಇಲ್ಲ ಸಾರ್"
"ತಮ್ಮದು ಇದೇ ಉದ್ಯೋಗವ"
"ಹೌದು ಸಾರ್ ನನಗೆ ಕಣ್ಣು ಕಾಣುವುದಿಲ್ಲ. ಹುಟ್ಟು ಕುರುಡು. ನಮ್ಮದೊಂದು ಸಂಘಟನೆಯಿದೆ. ಎಲ್ಲರೂ ವಿಕಲಾಂಗರೆ ಅಲ್ಲಿ. ಕಾಲು ಇಲ್ಲದವರೂ, ಮಾತು ಬಾರದವರು, ಕಿವುಡರೂ ಎಲ್ಲರೂ ಸೇರಿ ಚೀಲ ಹೊಲಿಯುತ್ತಾರೆ, ನಾವು ಕುರುಡರು ಆ ಚೀಲವನ್ನ ಮಾರುತ್ತೇವೆ. ನಮಗೆ ಒಂದು ಚೀಲ ಮಾರಿದರೆ ಹತ್ತು ರೂಪಾಯಿಗಳನ್ನ ಕೊಡುತ್ತಾರೆ. ಅದರಲ್ಲಿ ಜೀವನ ಸಾಗುತ್ತದೆ. "
ಕಣ್ಣು ಕಾಣದವನ ಕಣ್ಣುಗಳಲ್ಲಿ ದಿವ್ಯ ಬೆಳಕೊಂದು ಕಂಡಿತು. ಒಂದು ಚೀಲವನ್ನ ತೆಗೆದುಕೊಂಡು ಬಂದುಬಿಟ್ಟೆ. ಆ ಕುರುಡ ನನಗೆ ದಿವ್ಯ ಬೆಳಕಿನ ಪಥವೊಂದನ್ನ ತೋರಿ ಹೋಗಿದ್ದ. ಅಂದು ನಿರ್ಧರಿಸಿದೆ. ಈ ಬದುಕಿನ ಉದ್ದೇಶ ಹಾಗು ಸಾರ್ಥಕ್ಯ ಇರುವುದು ಬದುಕನ್ನ ಅರಿಯುವುದರಲ್ಲಿ. ಬದುಕನ್ನ ಅರಿಯುವುದು ಸಾದ್ಯವಾಗುವುದು, ಪ್ರಾಮಾಣಿಕವಾಗಿ ಮೌಲ್ಯಯುತವಾಗಿ, ತೀವ್ರ ಜೀವನ ಪ್ರೀತಿಯಿಂದ ಬದುಕುವುದರಿಂದ ಅಂತ ಅನ್ನಿಸಿತು. ಸಾಕ್ಷಿಪ್ರಜ್ಞೆಗೆ ಸಹಮತನಾಗಿ ಜೀವನ ನಡೆಸುವುದೇ ಪ್ರಾಮಾಣಿಕತೆಯೆಂದುಕೊಂಡೆ. ಗಟ್ಟಿ ನಿರ್ದಾರ ಮಾಡಿದ್ದೆ. ತೀವ್ರ ಜೀವನ ಪ್ರೀತಿಯಿಂದ ಬದುಕುವುದರಿಂದ ಮಾತ್ರ ನಾನು ಬದುಕನ್ನ ಅರಿಯಬಲ್ಲೆ. ಇಡೀ ಬದುಕನ್ನ ನನಗೆ ಒಂದೇ ದಿನಕ್ಕೆ ಸೀಮಿತಗೊಳಿಸಿದರೆ ಬದುಕುವಷ್ಟು ತೀವ್ರವಾಗಿ ಪ್ರತಿ ದಿನವನ್ನೂ ಜೀವಿಸಬೇಕೆಂದುಕೊಂಡೆ. ಈಗಲೂ ಸದ್ಯ ಹಾಗೆ ಬದುಕುತ್ತಿದ್ದೇನೆ. ಅಂದು ಆ ಸಂಶೋದನಾ ಸಂಸ್ಥೆಯನ್ನ ಬಿಟ್ಟೆ. ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡೆ. ಸದ್ಯ ಶಿಕ್ಷಕನಾಗಿ ಮಕ್ಕಳಿಗೆ ನನಗೆ ಗೊತ್ತಿರುವುದನ್ನು ಕಲಿಸುತ್ತ, ಅವರಿಂದ ಹಲವನ್ನ ಪಡೆಯುತ್ತ, ಅನಂತ ಸ್ವಾತಂತ್ರ್ಯದೆಡೆಗೆ ಹೆಜ್ಜೆಯಿಡುತ್ತಿದ್ದೇನೆ.