ಮೃಣನ್ಮಯಿಗೆ

ಸಾವಿರ ಜೀವಿಯ ಹಂತಕಿ
ಎರೆಡು ಕಣ್ಗಳ ಭಾರಕ್ಕೆ
ಮೆಜೆಸ್ಟಿಕ್ಕಿನ ಗಲ್ಲಿ ಗಲ್ಲಿಗಳಲ್ಲಿ ವಿಲವಿಲ ಒದ್ದಾಡುತ್ತ ಅಲೆಯುತ್ತಾಳೆ
ಪರಮ ಪಾಪಿ ಸತ್ಯದಂತೆ
ಸೂಳೇರು ಅಲೆಯೋ ಹೊತ್ತಲ್ಲಿ, ಆ ದಿಕ್ಕಲ್ಲಿ
ನನ್ನೀ ಮನೆಯ ಬಾಗಿಲು ಬಡಿಯುತ್ತಾಳೆ
ದಡಬಡಿಸಿ ಓಡಿ ಬಂದು
ಬಾಗಿಲು ತೆರೆದಾಗ
ಎದುರಿಗೇ ಸತ್ತು ಬಿದ್ದಿದ್ದಾಳೆ
ಆ ಶವವನ್ನೂ ಸಂಭೋಗಿಸಬೇಕೆಂಬೋ ಶರೀರ ಅವಳದು
ಏನು ಮಾಡಬೇಕೆಂದು ತೋಚಲಿಲ್ಲ.

ಮೃಣನ್ಮಯಿಗೆ

ಚಿತ್ರಗಳು ಕೃತಿಗಳಾಗಲಿಕ್ಕಿಲ್ಲ,
ಸರಳ ರೇಖೆ ಎಂದರೆ ಉದ್ದಕ್ಕೆ ಹೀಗೇ ಇರಬೇಕು
ಪರಿಪೂರ್ಣ ವೃತ್ತ ಎಂದರೆ ಗುಂಡಾಗಿ ಇರಬೇಕು
ಇವರಿಬ್ಬರೂ ಗಂಡ ಹೆಂಡತಿ
ಗಂಡ ಹೆಂಡತಿಯನ್ನು ಮಗಳೇ ಎಂದು ಕರೆಯುತ್ತಾನೆ
ಹೆಂಡತಿ ಗಂಡನನ್ನು ಅಮ್ಮ ಎಂದು ಕರೆಯುತ್ತಾಳೆ.
ಗುರು ಹೇಳುತ್ತಾನೆ,
ನನಗೆ ಹೆಂಡತಿ ಹಾಗು ತಂಗಿ ಇಬ್ಬರೂ ಒಂದೆ.
ದೇವರು-ತರ್ಕ-ಸಂಬಂಧ       
ಚಿತ್ರಗಳು ಕೃತಿಗಳಾಗಲಿಕ್ಕಿಲ್ಲ.

ಮೃಣನ್ಮಯಿಗೆ

ಬಾರಲ್ಲಿ ಕೆಲಸ ಮಾಡೋ, ಆ ಪುಟ್ಟ್ ಹುಡುಗನ ಕಣ್ಗಳು
ಸ್ಮಶಾನದ ಬೆಂಕಿಯಲ್ಲಿ ಸುಡುತ್ತಿರೋ ಶವದ ಕಣ್ಗಳು.
ನಾನು ಬರೆಯುತ್ತೇನೆ,
ಅವನ ಕಣ್ಗಳು,
ಮಗು ಸ್ಲೇಟಲ್ಲಿ ಗೀಚಿದ ರೇಖಾಚಿತ್ರ.
ಹುಡುಗಿ, ನಾನಿನ್ನೂ ಬದುಕಿದ್ದೀನಿ ನೋಡು.